ಹಾಸನ: ನಗರದ ಹರ್ಷ ಮಹಲ್ ರಸ್ತೆಯ ಪಕ್ಕದಲ್ಲಿರುವ ಆಚಾರ್ಯ ಕಾಲೇಜಿನಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಒಂದು ವಾರ ಕಾಲ ಆಯೋಜಿಸಿರುವ ‘ನುಡಿಸಿರಿ’ ಕಾರ್ಯಕ್ರಮಕ್ಕೆ ನವೆಂಬರ್ 3ರಂದು ಚಾಲನೆ ನೀಡಲಾಯಿತು.
ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿರಿಕನ್ನಡ ದಿನಪತ್ರಿಕೆಯ ಸಂಪಾದಕ ಆನಂದ್ ಪಟೇಲ್ ನೆಲ್ಲಿಗೆರೆ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ನಾಡು, ನುಡಿ, ನೆಲ, ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಹಿತ್ಯದ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡುವ ಉದ್ದೇಶದಿಂದ ಕಾಲೇಜಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಕಾಲೇಜಿನ ಪ್ರಾಂಶುಪಾಲ ಆದರ್ಶ ಅವರಿಗೆ ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಮತ್ತು ಪ್ರೀತಿಯನ್ನು ಇದು ತೋರಿಸುತ್ತದೆ ಎಂದರು.
ಕನ್ನಡ ನಾಡು-ನುಡಿ ಹಾಗೂ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಚಿಂತನೆಗಳು ಮತ್ತು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಸಾಹಿತಿಗಳು ಹಾಗೂ ಗಣ್ಯರನ್ನು ಆಹ್ವಾನಿಸಿರುವುದು ಉತ್ತಮ ಪ್ರಯತ್ನ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ಒಲವು ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಸವನಗಟ್ಟ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪುಷ್ಪಾ ಪಿ.ಎಚ್. ಮಾತನಾಡಿ, ವಿದ್ಯಾರ್ಥಿಗಳನ್ನು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವುಳ್ಳವರನ್ನಾಗಿ ರೂಪಿಸಲು ಹಾಗೂ ಕನ್ನಡ ನಾಡು-ನುಡಿಯ ಮಹತ್ವವನ್ನು ತಿಳಿಸಿಕೊಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಹಾಸನದ ಹಿರಿಯ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕಾಲೇಜಿನ ಪ್ರಾಚಾರ್ಯ ಆದರ್ಶ ಅವರು ಹಿಂದೆ ಅರ್ಥಶಾಸ್ತ್ರ ಎಂ.ಎ. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ತಂಡಕ್ಕೆ ಸಂಗೊಳ್ಳಿ ರಾಯಣ್ಣನ ಪಾತ್ರವನ್ನು ಕಲಿಸಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದರು. ಇಂದು ಆಕಸ್ಮಿಕವಾಗಿ ಈ ಕಾಲೇಜಿಗೆ ಆಗಮಿಸಿ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಪ್ರತಿಭೆ ಇರುತ್ತದೆ. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆ, ಸಾಹಿತ್ಯ ಓದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬೇಕು. ನನ್ನ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯ ಓದಿಕೊಂಡಿದ್ದೇ ಮುಂದೆ ಸಾಹಿತಿಯಾಗಿ ಗುರುತಿಸಿಕೊಳ್ಳಲು ನೆರವಾಯಿತು. ಓದು ಎಂದಿಗೂ ಫಲದಾಯಕ ಎಂದು ಕಿವಿಮಾತು ಹೇಳಿದರು.
ಹಿಮ್ಸ್ ಆಸ್ಪತ್ರೆಯ ನಿವೃತ್ತ ವೈದ್ಯರಾದ ಜಗದೀಶ್ ಮಾತನಾಡಿ, ನಾಡು, ನುಡಿ, ನೆಲ, ಜಲ ಹಾಗೂ ಭಾಷೆಗಾಗಿ ಹೋರಾಡಿ ತ್ಯಾಗ ಮಾಡಿದ ಮಹನೀಯರು, ಕವಿಗಳು ಮತ್ತು ಸಾಹಿತಿಗಳನ್ನು ಸ್ಮರಿಸುವುದು ಹಾಗೂ ಮಾತೃಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಆದರ್ಶ ಮಾತನಾಡಿ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಆಲಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಅವಕಾಶಗಳನ್ನು ಬಳಸಿಕೊಂಡು ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದರು.
ಒಂದು ವಾರ ನಡೆಯುವ ‘ನುಡಿಸಿರಿ’ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಗ್ರಾಮೀಣ ಕ್ರೀಡೆಗಳು ಹಾಗೂ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿನಿ ಮೇಘಾ ವಂದಿಸಿದರು.
