ಶ್ಲೋಕ – 21
ಪೃಥಕ್ ತ್ವೇನ ತು ಯಜ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್ ।
ವೇತ್ತಿ ಸರ್ವೇಷು ಭೂತೇಷು ತಜ್ ಜ್ಞಾನಂ ವಿದ್ಧಿ ರಾಜಸಮ್ ॥೨೧॥
ಪೃಥಕ್ ತ್ವೇನ ತು ಯತ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್ ।
ವೇತ್ತಿ ಸರ್ವೇಷು ಭೂತೇಷು ತತ್ ಜ್ಞಾನಂ ವಿದ್ಧಿ ರಾಜಸಮ್ – ಭಗವಂತನ ಶಕ್ತಿಯಲ್ಲಿ ಅಂತರವನ್ನು ಕಾಣುವುದು, ಎಲ್ಲ ಜೀವಿಗಳಲ್ಲಿ ಬಗೆಬಗೆಯ ದೈವೀಶಕ್ತಿಗಳು ಬೇರೆಬೇರೆಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಯುವುದು[ಎಲ್ಲ ಜೀವಿಗಳಲ್ಲಿರುವ ಭೇದವನ್ನು ಮಾತ್ರ ಗುರುತಿಸುವ, ಒಂದರಂತೆ ಒಂದಿಲ್ಲ ಎಂದರಿಯುವ, ಆದರೆ ಭಗವತ್ ಪ್ರಜ್ಞೆಯಿರದ ಕೇವಲ ಭೌತಿಕ ನಿಜದರಿವು] ರಾಜಸ ಎಂದು ತಿಳಿ.
ಏಕಭಕ್ತಿ ಇಲ್ಲದೆ ಅನೇಕ ದೇವತಾವಾದದಲ್ಲಿ ನಂಬಿಕೆ-ರಾಜಸ ಅರಿವು. ಇವರಿಗೆ ಅಖಂಡವಾದ ಪರತತ್ವದ ಎಚ್ಚರವಿರುವುದಿಲ್ಲ. ಇವರು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ದೇವತೆಗಳನ್ನು ಪೂಜೆ ಮಾಡುತ್ತಾರೆ. ಇಂದಿನ ಜ್ಯೋತಿಷ್ಯ ಕೂಡ ಜನರನ್ನು ಈ ತಪ್ಪು ದಾರಿಯಲ್ಲಿ ಹೋಗುವಂತೆ ಪ್ರೇರಣೆ ಮಾಡುತ್ತಿದೆ. ಅಖಂಡವಾದ ಭಗವಂತನ ಎಚ್ಚರವಿಲ್ಲದೆ ಒಂದೊಂದು ಗ್ರಹಚಾರಕ್ಕೆ ಒಂದೊಂದು ದೇವತೆಯಪೂಜೆ ಮಾಡುವುದು ರಾಜಸ ಅರಿವು. ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಭಗವಂತನ ಎಚ್ಚರದಿಂದ ಮಾಡಿದರೆ ಆ ಪೂಜೆ ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ ರಾಜಸವಾಗುತ್ತದೆ.
