ಆನಂದ ರಾಠಿ ಗ್ರೂಪ್ನ ಬ್ರೋಕರೇಜ್ ಅಂಗಸಂಸ್ಥೆ ಆನಂದ ರಾಠಿ ಶೇರ್ಸ್ ಆಂಡ್ ಬ್ರೋಕರ್ಸ್ ಐಪಿಒ(ಆರಂಭಿಕ ಸಾರ್ವಜನಿಕ ಕೊಡುಗೆ) ಪ್ರವೇಶಕ್ಕೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ) ಎದುರು ಎರಡನೇ ಬಾರಿಗೆ ಕರಡು ದಾಖಲೆಗಳನ್ನು (ಡಿಆರ್ಹೆಚ್ಪಿ) ಸಲ್ಲಿಕೆ ಮಾಡಿದೆ.
ಐಪಿಒ ಮೂಲಕ 745 ಕೋಟಿ ರೂ ಸಂಗ್ರಹಕ್ಕೆ ಮುಂದಾಗಿರುವ ಸಂಸ್ಥೆ ಈ ಮೊದಲು ಡಿಸೆಂಬರ್ ನಲ್ಲಿ ಕರಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು. 5 ರೂಪಾಯಿ ಮುಖಬೆಲೆಯ ಷೇರು ಇದಾಗಿದ್ದು 745 ಕೋಟಿ ರೂ ಮೌಲ್ಯದ ಷೇರುಗಳು ಸಂಪೂರ್ಣ ಹೊಸ ವಿತರಣೆ ಆಗಿದೆ. ಈ ಜೊತೆಗೆ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಸ್ ( ಬಿಆರ್ಎಲ್ಎಮ್) ಸಲಹೆಗಳನ್ನು ಪಡೆದು ಐಪಿಒ ಪೂರ್ವದಲ್ಲಿ 149 ಕೋಟಿ ರು ಸಂಗ್ರಹದ ಯೋಜನೆಯನ್ನು ಕೂಡ ಹೊಂದಿದೆ. ಐಪಿಒ ಪೂರ್ವ ಸಂಗ್ರಹ ಪೂರ್ಣಗೊಂಡರೆ ಹೊಸ ಸಂಚಿಕೆಯಿಂದ ಐಪಿಒ-ಪೂರ್ವ ನಿಯೋಜನೆಗೆ ಅನುಗುಣವಾಗಿ ಸಂಗ್ರಹಿಸಲಾದ ಮೊತ್ತವನ್ನು ಕಡಿಮೆ ಮಾಡಲಾಗುತ್ತದೆ.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ದಿಂದ ಸಂಗ್ರಹಿಸಲಾದ ಮೊತ್ತದಲ್ಲಿ 550 ಕೋಟಿ ರೂ ಹಣವನ್ನು ದೀರ್ಘಕಾಲದ ಕಾರ್ಯನಿರತ ಬಂಡವಾಳದ ಅಗತ್ಯತೆಗೆ ಹಾಗೂ ಇನ್ನೀತರ ವ್ಯಾವಹಾರಿಕ ಅಗತ್ಯತೆಗೆ ಬಳಸಲಾಗುವುದು. ಈ ಕೊಡುಗೆಯನ್ನು ಬುಕ್ ಬಿಲ್ಡಿಂಗ್ ವ್ಯವಸ್ಥೆ ಮೂಲಕ ಕೈಗೊಳ್ಳಲಾಗುತ್ತಿದ್ದು ಶೇ. 50% ರಷ್ಟು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ಶೇ.15 ರಷ್ಟು ಸಾಂಸ್ಥಿಕವಲ್ಲದ ಖರೀದಿದಾರರಿಗೆ ಹಾಗೂ ಶೇ. 30 ರಷ್ಟು ಚಿಲ್ಲರೆ ವೈಯಕ್ತಿಕ ಹೂಡಿಕೆದಾರರಿಗೆ ಹಂಚಲಾಗಿದೆ.
