ಕರ್ನಾಟಕದ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಪಸರಿಸುವ ಕಾರ್ಯ ಬಹಳ ಕಷ್ಟದ ಕೆಲಸ. ಸಾಹಿತ್ಯ ಓದುವುದು, ಬರೆಯುವುದು ಸುಲಭವೇ ಆದರೂ ಅವರಿಗೊಂದು ವೇದಿಕೆ ಕೊಟ್ಟು ಬೆಳೆಸುವ ಪರಿ ಸಾಮಾನ್ಯವಾದುದಲ್ಲ. ಸಾಹಿತ್ಯ ಬರೆಯುತ್ತಲೇ ತಾನೂ ಬೆಳೆದು ತನ್ನ ಸುತ್ತಲಿನ ವಿದ್ಯಾರ್ಥಿಗಳು, ಸ್ನೇಹಿತರು, ಹಾಡುವವರು, ಬರೆಯುವವರಿಗೆ ದಾರಿದೀಪ ಆದವರು ಕೆಲವೇ ಕೆಲವು ಮಹನೀಯರ ಸಾಲಿನಲ್ಲಿ ಡಾ.ಎಸ್.ರಾಮಲಿಂಗೇಶ್ವರ ಅವರದು ಸದ್ದಿಲ್ಲದ ಕನ್ನಡದ ಸೇವೆ. ಅವರನ್ನು ವೇದಿಕೆ ಮಾಡಿಕೊಂಡು ಬೆಳೆದವರೆಷ್ಟೋ ಮಂದಿ ಮುಂದೆ ತಿರುಗಿ ನೋಡದವರೇ ಹೆಚ್ಚು.
50 ವರ್ಷಗಳ ಕಾಲ ಮಾಡಬಹುದಾದ ಕಾರ್ಯ ಚಟುವಟಿಕೆಗಳನ್ನು 1996 ರಿಂದ ಇವತ್ತಿನವರೆಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಕಲೆ ಶಿಕ್ಷಣ ಹೀಗೆ ಹಲವಾರು ಪ್ರಕಾರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಡಾ.ಸಿಸಿರಾ ಅವರು. ಕನ್ನಡ ಏನೆ ಕುಣಿದಾಡುವುದು , ಕಿವಿ ನಿಮಿರುವುದು ಇಂತಹ ಹಾಡು ಮಾತು ಭಾಷಣ ಕೇಳುವಾಗ ಅದೇನೋ ಒಂದು ರೀತಿಯ ರೋಮಾಂಚನ ಮತ್ತು ಗೌರವ. ಜನನಿ, ಜನ್ಮಭೂಮಿ ಇವುಗಳಿಗೆ ಬೆಲೆ ಕಟ್ಟಲಾಗದು. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಸಾಮಾಜಿಕವಾಗಿ , ಶೈಕ್ಷಣಿಕವಾಗಿ, ಸಂಘಟನಾತ್ಮಕವಾಗಿ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ ಹೀಗೆ ಬಹು ನೆಲೆಯಲ್ಲಿ ಗುರುತಿಸಲ್ಪಡುವ ಸಿದ್ಧನಹಳ್ಳಿ ಸಿದ್ದೇಗೌಡ ರಾಮಲಿಂಗೇಶ್ವರ ಅವರು ಅಂದಿನ ಬೆಂಗಳೂರು ಗ್ರಾಮಾಂತರ ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಿದ್ಧನಹಳ್ಳಿ ಗ್ರಾಮದಲ್ಲಿ ಸಿದ್ದೇಗೌಡ ಪದ್ಮ ದಂಪತಿಯ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೆಯವರಾಗಿ 1973 ಏಪ್ರಿಲ್ 05 ರಂದು ಜನಿಸಿದ ರಾಮಲಿಂಗೇಶ್ವರ ಅವರು ಕುಡಿಕೆ ಬೇವೂರಿನ ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕೆ.ಪಿ.ವೀರಣ್ಣ ಅವರ ಪಂಪನ ವಿಕ್ರಮಾರ್ಜುನ ಕಾವ್ಯ, ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಹಳಗನ್ನಡ ಪಾಠ ಪ್ರವಚನ ಇವರ ಮೇಲೆ ಗಾಢವಾದ ಪ್ರಭಾವ ಬೀರಿದವು.
ಅಂದಿನಿಂದ ಕನ್ನಡ ಮೇಷ್ಟ್ರಾಗಬೇಕೆಂಬ ಅವರ ಉತ್ಕಟ ಬಯಕೆ ಕೆಂಗಲ್ ಕುವೆಂಪು ಕಾಲೇಜಿನಲ್ಲಿ ಪ್ರೊ.ಆದಿಶೇಷರು, ಪ್ರೊ.ಜಯಣ್ಣ ಅವರ ಕನ್ನಡ ಪಾಠಗಳಿಂದಾಗಿ ಬೆಂಗಳೂರಿನ ಜ್ಞಾನಭಾರತಿ ಆವರಣದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆಯಲು ಮಾರ್ಗದರ್ಶನವಾಯಿತು. ಅಮೇರಿಕಾದ ಯೋಗ ಯೂನಿವರ್ಸಿಟಿಯಲ್ಲಿ ಪಿಹೆಚ್. ಡಿ ಪದವಿ ವ್ಯಾಸಂಗ ಪಡೆದು ಡಾಕ್ಟರೇಟ್ ಪದವೀಧರರಾದರು. 1998 ರಲ್ಲಿ ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನಲ್ಲಿ ಡಾ.ನಲ್ಲೂರು ಪ್ರಸಾದ್ ಅವರ ಶಿಷ್ಯರಾಗಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಪ್ರಾರಂಭವಾಯಿತು. ತದಾನಂತರ ಶಿಕ್ಷಣ ತಜ್ಞರು, ಗಾಂಧಿವಾದಿಗಳಾದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರ ಕೃಪಾಕಟಾಕ್ಷದಿಂದ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಳೆದ 25 ಹೆಚ್ಚು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಧ್ಯಯನ,ಅಧ್ಯಾಪನ, ಸಂಶೋಧನೆ, ಕವಿತೆ ,ಕತೆ, ಪ್ರಬಂಧ ಸಾಹಿತ್ಯ, ಲೇಖನ ಬರವಣಿಗೆಗಳ ಮೂಲಕ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಿಸಿರಾ ಎಂದೇ ಖ್ಯಾತಿ ಪಡೆದಿರುವ ಡಾ.ಸಿಸಿರಾ ಅವರು ಕನ್ನಡ ಸಂಘಟನೆಯ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಕಾರಣರಾದ ರಂಗಭೂಮಿ ಕಲಾವಿದರು, ಒಕ್ಕಲಿಗ ಜನಾಂಗದ ಬಗ್ಗೆ ಅಪಾರ ಒಲವು, ನಿಲುವುಗಳನ್ನು ಹೊಂದಿದ್ದ ತೋಟಗಾರಿಕೆ ಇಲಾಖೆಯ ಯು.ಸಿ.ಚಿಕ್ಕಣ್ಣ ಅವರನ್ನು ಸಿಸಿರಾ ಎಲ್ಲಿ ಹೋದರೂ ನೆನೆಯದೇ ಇರಲಾರರು. ಹೆತ್ತ ತಂದೆ ತಾಯಿ, ವಿದ್ಯೆ ನೀಡಿದ ಗುರುಗಳು, ಅನ್ನ ಕೊಟ್ಟವರನ್ನು ಸದಾ ಸ್ಮರಿಸುವ ಮಹಾ ವ್ಯಕ್ತಿತ್ವ ಸಿಸಿರಾ ಅವರದು.

ಇಷ್ಟು ಹಿನ್ನೆಲೆ ಇರುವ ಸಿಸಿರಾ 1998 ರಲ್ಲಿ ಚನ್ನಪಟ್ಟಣ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ , ಜಿಲ್ಲಾ ಕಾರ್ಯದರ್ಶಿ ಆಗಿ ಶಿವರಾಮೇಗೌಡ ನಾಗವಾರ, ಸು.ತ.ರಾಮೇಗೌಡರೊಟ್ಟಿಗೆ ಕನ್ನಡದ ತೇರನ್ನೆಳೆಯುವಲ್ಲಿ ತನು ಮನ ಧನ ಖರ್ಚು ಆದದ್ದು ಲೆಕ್ಕವಿಲ್ಲದಷ್ಟು. ಇವರ ಕಾರ್ಯವೈಖರಿ ಕಂಡು ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜಿಲ್ಲೆಯ ಕಸಾಪ ಸದಸ್ಯರು ಆಯಾ ತಾಲೂಕಿನ ಜನತೆ ಅವರವರೇ ಖರ್ಚು ಹಾಕಿಕೊಂಡು ಅಭೂತಪೂರ್ವ ವಿ ಚುನಾವಣೆಯಲ್ಲಿ ಗೆಲ್ಲಿಸಿದರು.
ಆ ಸಂದರ್ಭದಲ್ಲಿ, ಮರೆಯಲಾರದ ರೀತಿಯಲ್ಲಿ ಚಟುವಟಿಕೆಗಳ ಚಿಲುಮೆಯಂತೆ, ಇವತ್ತಿಗೂ ನೆನಪಿಸುವಂತೆ ಕಾರ್ಯಕ್ರಮ ರೂಪಿಸಿ ಜೈಸಿದವರು. ಪ್ರತಿ ಹಂತದಲ್ಲೂ ಹೆಗಲಿಗೆ ಹೆಗಲು ಕೊಟ್ಟು ಸಿಸಿರಾ ಅವರೊಟ್ಟಿಗೆ ದುಡಿದವರು ಚನ್ನಪಟ್ಟಣದ ಶಿಕ್ಷಕರಾದ ವಸಂತ್ ಕುಮಾರ್, ಪತ್ರಕರ್ತರಾದ ಎಂ.ಶಿವಮಾದು, ಕೂರಣಗೆರೆ ಕೃಷ್ಣಪ್ಪ , ಸಿಸಿರಾ ಅವರ ಅಣ್ಣ ಸಿದ್ಧರಾಜು ಇವರ ಸಹಾಯ ಸಹಕಾರ ಪ್ರೋತ್ಸಾಹ ಸದಾ ನೆನಪಿಸಿಕೊಳ್ಳುವರು.
ಸಿಸಿರಾ ಅವರು ನಿಂತಲ್ಲಿ, ಕುಂತಲ್ಲಿ ಕನ್ನಡ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಶೀಲತೆ ಉಳ್ಳವರಾಗಿದ್ದರು. ಬೇವೂರು ಮಂಡ್ಯ ಗ್ರಾಮ ಸಮ್ಮೇಳನ ಅಧ್ಯಕ್ಷರಾಗಿ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ, ಹೋಬಳಿ ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರಾಗಿ ಸೀಬನಹಳ್ಳಿ ಸ್ವಾಮಿ, ಶಿವರಾಮೇಗೌಡ ನಾಗವಾರ, ಡಾ.ಕೂಡ್ಲೂರು ವೆಂಕಟಪ್ಪ, ಭೂಹಳ್ಳಿ ಪುಟ್ಟಸ್ವಾಮಿ.. ಆಯ್ಕೆ ಮಾಡಿ ಅದ್ದೂರಿಯಾಗಿ ಆಚರಿಸಲಾಯಿತು.ತಾಲ್ಲೂಕಿನ ಸಮ್ಮೇಳನ, ಜಿಲ್ಲಾ ಸಮ್ಮೇಳನ ಅಧ್ಯಕ್ಷರಾಗಿದ್ದವರು ನೆನೆಯಲೇ ಬೇಕಾದವರು ಪ್ರೊ.ವೆಂಕಟಾಚಲಶಾಸ್ತ್ರಿ ಕುದೂರು, ಡಾ.ಎಲ್.ಹನುಮಂತಯ್ಯ ತೂಬಗೆರೆ, ಪ್ರೊ.ಮಲ್ಲೇಪುರಂ ವೆಂಕಟೇಶ್ ನೆಲಮಂಗಲ, ಡಾ.ಹೆಚ್.ಎಲ್.ಪುಷ್ಪಾ ವಿಜಯಪುರ, ಡಾ.ಸಿ.ಸೋಮಶೇಖರ್ ಹೊಸಕೋಟೆ.. ಪ್ರೊ.ಶಿವರಾಮು ಕಾಡನಕುಪ್ಪೆರಾಮನಗರ.. ಹೀಗೆ ..
ನ ಭೂತೋ ನ ಭವಿಷ್ಯತಿ.. ಇಂತಹ ಸಮ್ಮೇಳನಗಳನ್ನು ಯಾರೂ ಹಾಗೆ ಮಾಡಲು ಸಾಧ್ಯವಿಲ್ಲ, ಸಾಧ್ಯವಾಗಿಲ್ಲ ಎಂದೇ ಹೇಳಬೇಕು.. ಇವತ್ತಿಗೂ ಕಣ್ಣಿಗೆ ಕಟ್ಟುವಂತಿವೆ ಎಂದು ನೆಲಮಂಗಲ ಡಿಡಿಪಿಐ ಪ್ರೊ.ಎಂ.ವಿ.ನೆಗಳೂರು ಇವತ್ತಿಗೂ ನೆನಪಿಸುತ್ತಾರೆ.

ಪ್ರೊ.ಚಂದ್ರಶೇಖರ ಪಾಟೀಲ್ (ಚಂಪಾ) ಅವರು ರಾಜ್ಯಾಧ್ಯಕ್ಷರಾಗಿದ್ದ ಕಾಲ . ಅದ್ಭುತ ಕೆಲಸ ಕಾರ್ಯಗಳನ್ನು ಮಾಡಲು ಪ್ರೇರಣೆ ಒದಗಿಸಿದವು. ಇವತ್ತು ರಾಮನಗರ, ಗ್ರಾಮಾಂತರ ಜಿಲ್ಲೆಗಳು ಬೇರೆ ಬೇರೆ ಆಗಿ 13/14 ವರ್ಷಗಳೇ ಸಂದಿವೆ. ಎರಡೂ ಜಿಲ್ಲೆಗಳಲ್ಲಿ ಸಾಹಿತ್ಯ ಸಂಸ್ಕೃತಿ ಸಂಘಟನೆ ಯಾವ ರೀತಿಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಯೋಚಿಸಿದರೆ ಪ್ರತಿಯೊಬ್ಬ ಸಾಹಿತ್ಯ ಸಂಸ್ಕೃತಿ ಚಿಂತಕರು ಯೋಚಿಸುವಂತೆ ಆಗಿದೆ. ಡಾ.ನಲ್ಲೂರು ಪ್ರಸಾದ್ ಅವರ ಸಾಹಸ, ಶ್ರಮದಿಂದ ಸರ್ಕಾರದ ಮೇಲೆ ಒತ್ತಡ ತಂದುದರ ಪರಿಣಾಮವಾಗಿ ಕಳೆದ 14 ವರ್ಷಗಳಿಂದ ಕಸಾಪವು ಸರ್ಕಾರದ ಮುಖಾಂತರ ವಿವಿಧ ಸಾಹಿತ್ಯ ಸಮ್ಮೇಳನಗಳಿಗೆ ಕನಿಷ್ಠ ಒಂದು ಲಕ್ಷದಿಂದ, ಮೂರು ಲಕ್ಷ, ಐದು ಲಕ್ಷ… ಹಣ ನೀಡುತ್ತಿದೆ .ಪ್ರತಿ ವರ್ಷ ಕಚೇರಿ ಖರ್ಚಿಗೆ, ಸಭಾ ನಡವಳಿಕೆಗಳಿಗೆ 25 ರಿಂದ 50 ಸಾವಿರದವರೆಗೂ ಹಣ ಬರುತ್ತದೆ . ಆದರೆ ಯಾವುದೇ ಕಾರ್ಯಕ್ರಮಗಳಿಗೂ ಜನರೇ ಬರದಿರುವುದು, ಸರಿಯಾಗಿ ಸಂಘಟಿಸದಿರುವುದು ಪ್ರಸ್ತುತ ದೊಡ್ಡ ಸಮಸ್ಯೆಯಾಗಿ ಉಳಿದಿದೆ.
ಯಾಕೆ ಜನ, ಸಾಹಿತ್ಯ ಪ್ರಿಯರು ಬರುವುದಿಲ್ಲ …! ? ಕಾರಣ ಜನರಿಗೆ ಬೇಕಾದ ರೀತಿಯಲ್ಲಿ ಸಂಗೀತ, ನಾಟಕ, ವಿದ್ವಾಂಸರುಗಳ ವಿಶೇಷ ಉಪನ್ಯಾಸಗಳನ್ನು ಆಯೋಜಿಸದಿರುವುದು, ಚಟುವಟಿಕೆಗಳನ್ನು ಕ್ರಿಯಾಯೋಜನೆ ಮೂಲಕ ಮಾಡದಿರುವುದು, ಇಂದಿನ ಪದಾಧಿಕಾರಿಗಳಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಇತ್ಯಾದಿಗಳಿಲ್ಲದಿರುವುದು.. ನ್ಯೂನತೆಗಳೇ ಹೆಚ್ಚು ಸವಾಲಾಗಿ ಪರಿಣಮಿಸಿವೆ. ರಾಮನಗರ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಪುಸ್ತಕ ಪರಿಚಯ ಆಗುವಂತೆ ನೋಡಿಕೊಳ್ಳುವಲ್ಲಿ ಪೇಲವವಾಗಿ ಕಾಣುತ್ತಿದೆ. ಜಿಲ್ಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲೊಂದು ಇಲ್ಲೊಂದು ತಾಲ್ಲೂಕು ಮಾಗಡಿ ರಾಮನಗರ, ಕನಕಪುರ ಅವರಿವರ ಸಂಘಟನೆಗಳೊಂದಿಗೆ ನಡೆಯುತ್ತಿರುವುದನ್ನು ಬಿಟ್ಟರೆ ಗಟ್ಟಿಯಾಗಿ ಜನಮಾನಸದಲ್ಲಿ ಉಳಿಯುವಂತಹ ಕಾರ್ಯಕ್ರಮ ನಡೆಯುತ್ತಿಲ್ಲ ಎಂಬ ಕೊರಗು ಕಸಾಪ ಸದಸ್ಯರುಗಳಲ್ಲಿ ಮನೆಮಾಡಿದೆ. ಯಾಕೆ ಹೀಗೆ ಎಂದು ಯೋಚಿಸಿದರೆ ಸ್ವಜನಪಕ್ಷಪಾತ, ರಾಜಕೀಯ ಪಕ್ಷಗಳ ಪುಡಾರಿಗಳ ಹಸ್ತಕ್ಷೇಪ, ಹಣಕೊಟ್ಟವರ ಮೆರವಣಿಗೆ, ಸಾರ್ವಜನಿಕರಿಂದ ಪಡೆದ ಹಣಕಾಸಿನ ವ್ಯವಹಾರಗಳಿಗೆ ಲೆಕ್ಕ ಪತ್ರ ತಿಳಿಸದಿರುವುದು, ಪದಾಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯಕ್ರಮ ನಿರ್ವಹಿಸದಿರುವುದು,…ಇವೆಲ್ಲವುಗಳಿಂದಾಗಿ ಜಿಲ್ಲೆಯ ಸಾಂಸ್ಕೃತಿಕ ವಾತಾವರಣ ಬಿರುಕು ಸೃಷ್ಟಿಸಲು ಕಾರಣವಾಗಿದೆ.

ಎಲ್ಲೇಗೌಡ್ರು, ನಾಗಪ್ರಿಯ ಸು.ತ.ರಾಮೇಗೌಡರು .. ಸಿಸಿರಾ ಅವರುಗಳ ಕಾಲದಲ್ಲಿ ಎರಡು ಜಿಲ್ಲೆಗಳು, ಎಂಟು ತಾಲ್ಲೂಕುಗಳು ಎಲ್ಲಾ ಕಡೆಯಲ್ಲೂ ದಾನಿಗಳು, ಉಳ್ಳವರು ಮುಂದೆ ಬಂದು ಸಹಾಯ ಸಹಕಾರ ಪ್ರೋತ್ಸಾಹ ನೀಡುವ ಮೂಲಕ ಒಳ್ಳೊಳ್ಳೆಯ ಚಟುವಟಿಕೆಗಳು ನಡೆಯುವಂತೆ ನಿರಂತರವಾಗಿ ನೋಡಿಕೊಂಡರು. ಆದರೆ ಇಂದು ಹಣವಿದೆ, ಗುಣವೂ ಇರಬೇಕು ನಾನು, ನನ್ನದು, ನನ್ನಿಂದ … ಎನ್ನದೆ ಪ್ರತಿಯೊಬ್ಬರೂ ಒಳಗೊಳ್ಳುವಿಕೆ ಹೆಚ್ಚು ಅನಿವಾರ್ಯತೆಯಾಗಿದೆ. ಸಿಸಿರಾ ಅವರು ವೈವಾಹಿಕವಾಗಿ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಲ್ಲ ಸರಳತೆ, ಸಜ್ಜನಿಕೆಯಿಂದ ಜಿಲ್ಲೆಯಿಂದ ದೂರವಿದ್ದರೂ ತಾವಿದ್ದ ತಾಣದಲ್ಲಿ ನಿರಂತರ ಸಾಹಿತ್ಯ ಸಂಘಟನೆ, ಬರವಣಿಗೆ, ಓದುವಿಕೆ,ಬರೆಯುವುದರಲ್ಲಿ, ಹತ್ತಾರು ಕಾರ್ಯಕ್ರಮಗಳಲ್ಲಿ ಭಾಷಣ, ಹಾಡುಗಾರಿಕೆ, ಹಾಸ್ಯ ಹತ್ತು ಹಲವು ಮಿತ್ರರೊಂದಿಗೆ ಸದಾ ಇವತ್ತಿಗೂ ಕಾರ್ಯೋನ್ಮುಖವಾಗಿದ್ದಾರೆ.
ಜೀವನ ಸಂಸಾರ , ಬದುಕಿಗಾಗಿ ಉಪನ್ಯಾಸ ವೃತ್ತಿ ಇವೆಲ್ಲವೂ ತುಂಬಾ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆ. ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿ ಸಾವಿರಾರು ಮಂದಿ ಕಲಾವಿದರು, ಸಾಹಿತಿಗಳು, ನಿಜದ ಸಾಧಕರಿಗೆ ಸಾಹಿತ್ಯ ಪರಿಷತ್ತಿಗಿಂತಲೂ ವಿಭಿನ್ನ ವಿನೂತನ ಪ್ರಯೋಗಗಳ ಮೂಲಕ ಸಾಹಿತ್ಯ ಲೋಕವನ್ನು ಜೀವಂತವಾಗಿ ಉಳಿಸಿ ಬೆಳೆಸುತ್ತಿದ್ದಾರೆ. ಜಿಲ್ಲೆಯ ಕಸಾಪ ಬೆಳವಣಿಗೆಗೆ ಅವಿಶ್ರಾಂತ ದುಡಿದವರು ಸರ್ಕಾರದ ಯಾವ ನೆರವಿಲ್ಲದೇ ಕನ್ನಡ ಕಟ್ಟಿದ ಧೀಮಂತ ವ್ಯಕ್ತಿತ್ವ ಡಾ.ಸಿಸಿರಾ ಅವರದು. ಅವರು ಸಾಂಸ್ಕೃತಿಕ ಲೋಕವನ್ನು ಕಟ್ಟುವವರಿಗೆ ಇವರು ನಿಜದ ಗಟ್ಟಿ ಧ್ವನಿ.. ಪ್ರೇರಕರು. ತಪ್ಪನ್ನು ತಪ್ಪೆನ್ನುವ, ಸರಿಯಾದುದ್ದನ್ನು ಸರಿಯೆಂದು ಹೇಳುವವರು . ಅವರಿಗೆ ಯಾರ ಹಂಗೂ ಇಲ್ಲದೆ ತಮಗೆ ತಾವೇ ಬೆಳೆದು , ಇತರರನ್ನೂ ಬೆಳೆಸಿದವರು.

ಗಾಂಧಿ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳನ್ನು ಓದಿಕೊಂಡವರು, ಅವರ ವಿಚಾರಧಾರೆಗಳನ್ನು ಹಂಚುವವರು. ಪಾಲನೆಯಲ್ಲೂ ಕೂಡಾ. ಶ್ರೀಯುತ ರಾಮಲಿಂಗೇಶ್ವರ ಅಲಿಯಾಸ್ ಸಿಸಿರಾ ಅವರಿಗೆ 52 ವರ್ಷ ತುಂಬಿದ ಸಂಭ್ರಮ… ಅವರ ಜೀವನ ಪರಿಷತ್ತಿಗೆ, ಸಂಘಸಂಸ್ಥೆಗಳಿಗೆ ನೀಡಿದ ಕೊಡುಗೆ ಅಪಾರ. ಸಿಸಿರಾ ಬದುಕು ಬರಹ ಕುರಿತಾದ ವಿಚಾರ ಸಂಕಿರಣ ಏಪ್ರಿಲ್ 10 ನೇ ತಾರೀಖು ಗುರುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ . ಬನ್ನಿರಿ.
– ಸಾ.ಮ.ಶಿವಮಲ್ಲಯ್ಯ,
ಲೇಖಕರು,
ಅಧ್ಯಾಪಕರು,ಕನಕಪುರ.
