ಹಾಸನ – ತೀವ್ರ ಕುತೂಹಲ ಮೂಡಿಸಿದ್ದ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಜೆಡಿಎಸ್ಗೆ ಸೋಲಾಗಿದೆ.
ಸೋಮವಾರ ನಗರಸಭೆ ಕುವೆಂಪು ಸಭಾಂಗಣದಲ್ಲಿ ನಡೆದ ಉಪಾಧ್ಯಕ್ಷೆ ಹೇಮಲತಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಚಂದ್ರೇಗೌಡರ ವಿರುದ್ಧ 21 ಮತ ಚಲಾವಣೆಯಾದರೆ, ಪರವಾಗಿ 16 ಮತ ಚಲಾವಣೆಯಾದವು.
ಹೀಗಾಗಿ ಪಕ್ಷದ ವರಿಷ್ಠರಿಗೆ ಸೆಡ್ಡು ಹೊಡೆದಿದ್ದ ಚಂದ್ರೇಗೌಡ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಂದಲ್ಲ, ಎರಡು ಬಾರಿ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಜೆಡಿಎಸ್ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ತೀವ್ರ ಮುಖಭಂಗವಾಗಿದೆ.
ಸಕಾಲಕ್ಕೆ ಆಗಮನ: ಮಧ್ಯಾಹ್ನ 12.30ಕ್ಕೆ ಸಭೆ ನಿಗದಿಯಾಗಿತ್ತು. ಮೊದಲೇ ವಿಪ್ ಜಾರಿ ಮಾಡಿದ್ದರಿಂದ ಬಿಜೆಪಿಯ 13 ಸದಸ್ಯರು ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಸಕಾಲಕ್ಕೆ ಆಗಮಿಸಿದರು.
ಅವಿಶ್ವಾಸ ನಿರ್ಣಯ ಗೆಲ್ಲಲು ಜೆಡಿಎಸ್ 26 ಸದಸ್ಯರ ಬಲ ತೋರಿಸಬೇಕಿತ್ತು. ಆದರೆ ಒಬ್ಬರು ಕಾಂಗ್ರೆಸ್ ಸದಸ್ಯೆ ಸೇರಿ ಮತ ಹಾಕಿದ್ದು 21 ಮಂದಿ ಮಾತ್ರ. ಚಂದ್ರೇಗೌಡರ ಪರ 13 ಬಿಜೆಪಿ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯರು, ಸಂಸದ ಮತ್ತು ಒಬ್ಬರು ಕಾಂಗ್ರೆಸ್ ಸದಸ್ಯೆ ಸೇರಿ 16 ಮಂದಿ ಕೈ ಎತ್ತಿದರು. ಅಲ್ಲಿಗೆ ಚಂದ್ರೇಗೌಡ ಗೆದ್ದರು. 5 ಮತಗಳ ಕೊರತೆಯಿಂದ ರೇವಣ್ಣ ಸೋತರು.
ಅಧ್ಯಕ್ಷ ಚಂದ್ರೇಗೌಡ ತಟಸ್ಥವಾಗಿದ್ದರು.
ಮುನ್ನೆಚ್ಚರಿಕೆಯಾಗಿ ನಗರಸಭೆಯ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
