ಬೆಂಗಳೂರು : ಪ್ಲಂಬಿಂಗ್ ಮತ್ತು ನೀರು ನಿರ್ವಹಣೆ ಮಾಡುವ ಉತ್ಪನ್ನಗಳನ್ನು ಒದಗಿಸುವ ಭಾರತದ ಪ್ರಮುಖ ಸಂಸ್ಥೆಯಾದ ಆಶೀರ್ವಾದ್ ಬೈ ಅಲಿಯಾಕ್ಸಿಸ್, ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳ ಸರಣಿಯನ್ನು ಆಯೋಜಿಸಿದೆ.
ಈ ಮೂಲಕ ಸಮುದಾಯದ ಕಲ್ಯಾಣ ಕುರಿತ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಸಮಾಜದ ಸುರಕ್ಷತೆ ಮತ್ತು ಭದ್ರತೆಗಾಗಿ ದಣಿವರಿಯಿಲ್ಲದೆ ಶ್ರಮಿಸುವ ಮುಂಚೂಣಿ ಕಾರ್ಯಕರ್ತರಾದ ಪೊಲೀಸರ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಆರೋಗ್ಯ ಶಿಬಿರದ ಭಾಗವಾಗಿ 80 ಮಹಿಳಾ ಸಿಬ್ಬಂದಿ ಸೇರಿದಂತೆ ಸುಮಾರು 650 ಪೊಲೀಸ್ ಸಿಬ್ಬಂದಿಗಳು ನೋಂದಾಯಿಸಿಕೊಂಡು, ಸುಮಾರು 4,000 ಮುಂಜಾಗ್ರತಾ ಆರೋಗ್ಯ ತಪಾಸಣೆಗಳಿಗೆ ಒಳಪಟ್ಟರು.
ಸ್ಮೈಲ್ ಫೌಂಡೇಶನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಸದಾ ಬಿಡುವಿಲ್ಲದ ಕಠಿಣ ಕೆಲಸದ ವೇಳಾಪಟ್ಟಿ ಮತ್ತು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ಸೀಮಿತ ಅವಕಾಶಗಳನ್ನು ಹೊಂದುವ ಪೊಲೀಸ್ ಸಿಬ್ಬಂದಿಗೆ ಅಗತ್ಯ ಮುಂಜಾಗ್ರತಾ ವೈದ್ಯಕೀಯ ಸೌಲಭ್ಯಗಳನ್ನು ಈ ಶಿಬಿರದ ಮೂಲಕ ಸುಲಭವಾಗಿ ಕಲ್ಪಿಸಿಕೊಡಲಾಯಿತು.
ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಅತ್ತಿಬೆಲೆ, ಹೆಬ್ಬಗೋಡಿ ಮತ್ತು ಪರಪ್ಪನ ಅಗ್ರಹಾರ ಸೇರಿದಂತೆ ಬೆಂಗಳೂರಿನ 5 ಪ್ರಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳಗಳಲ್ಲಿ ಈ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು. ಈ ಶಿಬಿರಗಳಲ್ಲಿ ಸಾಮಾನ್ಯ ವೈದ್ಯರ ಜೊತೆ ಸಮಾಲೋಚನೆ, ಹೃದ್ರೋಗ ತಪಾಸಣೆ, ಶ್ವಾಸಕೋಶದ ಸಾಮರ್ಥ್ಯದ ತಪಾಸಣೆ (ಸ್ಪೈರೋಮೆಟ್ರಿ), ಶ್ರವಣ ದೋಷ ತಪಾಸಣೆ (ಆಡಿಯೋಮೆಟ್ರಿ), ಕಣ್ಣಿನ ತಪಾಸಣೆ, ಪ್ರಯೋಗಾಲಯ ರೋಗನಿರ್ಣಯ ಪರೀಕ್ಷೆಗಳು ಹಾಗೂ ಮಹಿಳಾ ಸಿಬ್ಬಂದಿಗಾಗಿ ಸ್ತ್ರೀರೋಗ ವೈದ್ಯರ ಜೊತೆ ಸಮಾಲೋಚನೆ ಸೇರಿದಂತೆ ಬಹು ಶಿಸ್ತೀಯ ಆರೋಗ್ಯ ತಪಾಸಣಾ ಸೇವೆಗಳನ್ನು ಒದಗಿಸಲಾಯಿತು.

ಈ ಯೋಜನೆ ಕುರಿತು ಮಾತನಾಡಿದ ಆಶೀರ್ವಾದ್ ಬೈ ಅಲಿಯಾಕ್ಸಿಸ್ ಸಂಸ್ಥೆಯ ಸಿಎಫ್ಒ ಮತ್ತು ಸಿಎಸ್ಆರ್ ವಿಭಾಗದ ಮುಖ್ಯಸ್ಥರಾದ ಸುದೀಪ್ ಅಗರ್ವಾಲ್ ಅವರು, “ನಮ್ಮ ಪೊಲೀಸ್ ಮಿತ್ರರು ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ದಣಿವರಿಯದೆ ಕೆಲಸ ಮಾಡುತ್ತಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಅವರು ಹೆಚ್ಚಾಗಿ ಸ್ವಂತ ಜೀವನವನ್ನೇ ಬದಿಗಿಟ್ಟಿರುತ್ತಾರೆ. ಅವರಿಗೆ ನಮ್ಮ ಕೈಲಾದ ಎಲ್ಲಾ ರೀತಿಯ ಬೆಂಬಲವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮಂತಹ ಉಳಿದವರೆಲ್ಲರೂ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯುವ ದಿನಗಳಲ್ಲೂ ಪೊಲೀಸರು ದೀರ್ಘಾವಧಿಯ ಕಠಿಣ ಕರ್ತವ್ಯದಲ್ಲಿ ತೊಡಗಿರುತ್ತಾರೆ. ಇದನ್ನು ಮನಗಂಡು, ಈ ಆರೋಗ್ಯ ಶಿಬಿರಗಳ ಮೂಲಕ ಅವರಿಗೆ ಅಗತ್ಯವಿರುವ ವೈದ್ಯಕೀಯ ತಪಾಸಣೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ನಾವು ಆಶಿಸಿದ್ದೇವೆ” ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ಸಮರ್ಪಣಾ ಭಾವ ಹಾಗೂ ಈ ಕಾರ್ಯಕ್ರಮದ ಯಶಸ್ವಿ ಮುಕ್ತಾಯಕ್ಕೆ ಬೆಂಬಲ ನೀಡಿದ ಸಹಭಾಗಿ ಆಸ್ಪತ್ರೆಗಳು ಮತ್ತು ಸ್ವಯಂಸೇವಕರ ಕೊಡುಗೆಯನ್ನು ಶ್ಲಾಘಿಸುವ ಸಮಾರೋಪ ಸಮಾರಂಭದೊಂದಿಗೆ ಈ ಆರೋಗ್ಯ ತಪಾಸಣಾ ಶಿಬಿರಗಳ ಸರಣಿಯು ಮುಕ್ತಾಯಗೊಂಡಿತು. ಸಮಾರಂಭದ ಭಾಗವಾಗಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಠಾಣೆಗಳು ಮತ್ತು ಆಸ್ಪತ್ರೆಗಳ ಶ್ರಮವನ್ನು ಶ್ಲಾಘಿಸಿ, ಗೌರವದ ಸಂಕೇತವಾಗಿ ನೆನಪಿನ ಕಾಣಿಕೆಗಳನ್ನು (ಸ್ಮರಣಿಕೆ) ವಿತರಿಸಲಾಯಿತು.
ಈ ಆರೋಗ್ಯ ಶಿಬಿರದ ಕುರಿತು ಮಾತನಾಡಿದ ಬೆಂಗಳೂರು ನಗರದ ಡೆಪ್ಯೂಟಿ ಪೊಲೀಸ್ ಕಮಿಷನರ್ (ಡಿಸಿಪಿ) ಸತೀಶ್ ಕುಮಾರ್ ಅವರು, “ಪೊಲೀಸ್ ಸಿಬ್ಬಂದಿಯಾಗಿ ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ಈ ಜವಾಬ್ದಾರಿಯಲ್ಲಿ ಯಾವುದೇ ರಾಜಿ ಇಲ್ಲ. ಆದರೆ, ಇಂತಹ ಆರೋಗ್ಯ ಶಿಬಿರಗಳು ನಮ್ಮ ಸ್ವಂತ ಆರೋಗ್ಯ ಮತ್ತು ಕಲ್ಯಾಣವೂ ಅಷ್ಟೇ ಮುಖ್ಯ ಎಂಬುದನ್ನು ನಮಗೆ ನೆನಪಿಸುತ್ತವೆ. ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸದೃಢರಾಗಿರುವುದು ಸಮಾಜಕ್ಕೆ ನಮ್ಮ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡುತ್ತದೆ. ಈ ವೈದ್ಯಕೀಯ ಶಿಬಿರಗಳನ್ನು ನೇರವಾಗಿ ನಮ್ಮ ಬಳಿಗೇ ತಂದಿರುವುದು ಆಶೀರ್ವಾದ್ ಬೈ ಅಲಿಯಾಕ್ಸಿಸ್ ಸಂಸ್ಥೆಯ ಅತ್ಯಂತ ಶ್ಲಾಘನೀಯ ಯೋಜನೆಯಾಗಿದೆ. ನಮ್ಮ ಅನೇಕ ಸಿಬ್ಬಂದಿಗಳು ಈ ತಪಾಸಣೆಗಳಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಇದು ನಮ್ಮ ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಲು ನಮಗೆ ಪ್ರೇರೇಪಿಸುತ್ತದೆ” ಎಂದು ಹೇಳಿದರು.
ಸ್ಮೈಲ್ ಫೌಂಡೇಶನ್ನ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ ಸಂತನು ಮಿಶ್ರಾ ಮಾತನಾಡಿ, “ಸಮಾಜದ ಒಳಿತಿಗಾಗಿ ನೆರವಾಗುವ ಇಂತಹ ಯೋಜನೆಗಳನ್ನು ಜಾರಿಗೆ ತರಲು ನಮ್ಮದೇ ರೀತಿಯ ಆಲೋಚನೆಗಳನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಕೈಜೋಡಿಸುವುದು ಯಾವಾಗಲೂ ಸಂತೋಷದ ವಿಷಯವಾಗಿದೆ. ಈ ಕಾರ್ಯಕ್ರಮವು ನಮಗಾಗಿ ದಣಿವರಿಯಿಲ್ಲದೆ ದುಡಿಯುವ ನಮ್ಮ ಪೊಲೀಸ್ ವೀರರನ್ನು ಗುರುತಿಸಿ, ಅವರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವ ಮಹತ್ವವನ್ನು ನೆನಪಿಸುತ್ತದೆ. ಈ ಶಿಬಿರಗಳಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆಯಿಂದ ನಮಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದ್ದು, ಮುಂದಿನ ದಿನಗಳಲ್ಲೂ ಇಂತಹ ಯೋಜನೆಗಳನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ” ಎಂದರು.
ಸಮಾಜದ ಶಕ್ತಿಯಾಗಿರುವ ಮುಂಚೂಣಿ ಕಾರ್ಯಕರ್ತರ ಜೀವನಮಟ್ಟ ಮತ್ತು ಆರೋಗ್ಯದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಆಶೀರ್ವಾದ್ ಬೈ ಅಲಿಯಾಕ್ಸಿಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಇಂತಹ ನಿರಂತರ ಪ್ರಯತ್ನಗಳ ಮೂಲಕ, ಆಶೀರ್ವಾದ್ ಬೈ ಅಲಿಯಾಕ್ಸಿಸ್ ಸಂಸ್ಥೆಯು ತನ್ನ ವ್ಯಾಪಕ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಚಟುವಟಿಕೆಗಳ ಅಡಿಯಲ್ಲಿ ಸಾರ್ವಜನಿಕ ಕಲ್ಯಾಣಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಾ ಸಾಗಿದೆ.
