ಚನ್ನರಾಯಪಟ್ಟಣ: ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ B. R. Ambedkar ಅವರ 135ನೇ ಜನ್ಮದಿನಾಚರಣೆಯಲ್ಲಿ ಶಾಸಕ ಡಾ. ಸಿ.ಎನ್. ಬಾಲಕೃಷ್ಣ ಅವರು ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿದ ಸರ್ಕಾರಿ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಂ.ಜೆ. ರತ್ನಾಕರ್ ಮಾತನಾಡಿ, “ಸ್ವತಂತ್ರ ಭಾರತವನ್ನು ಸೌಹಾರ್ದ ಭಾರತವನ್ನಾಗಿ ರೂಪಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು. ಅವರು ರಚಿಸಿದ ಸಂವಿಧಾನವೇ ಇಂದು ಭಾರತ ದೇಶವನ್ನು ಏಕತೆಯಲ್ಲಿ ಉಳಿಸಿಟ್ಟಿದೆ” ಎಂದು ಹೇಳಿದರು.

ಅಂಬೇಡ್ಕರ್ ಅವರು ಕೇವಲ ಒಂದು ವರ್ಗದ ನಾಯಕನಲ್ಲ, ದೇಶದ 140 ಕೋಟಿ ಜನರಿಗೆ ಘನತೆಯಿಂದ ಬದುಕುವ ಹಕ್ಕು, ಮತದಾನದ ಹಕ್ಕು ಹಾಗೂ ಪ್ರಶ್ನಿಸುವ ಧೈರ್ಯವನ್ನು ನೀಡಿದ ಮಹಾನ್ ಮಾನವತಾವಾದಿ ಎಂದು ಅವರು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಆಧಾರದ ಮೇಲೆ ಹೊಸ ಸಮಾಜ ನಿರ್ಮಾಣವಾಗಬೇಕು ಎಂಬುದು ಅಂಬೇಡ್ಕರ್ ಅವರ ಕನಸು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಸಿ.ಎನ್. ಬಾಲಕೃಷ್ಣ ಮಾತನಾಡಿ, “ಅಂಬೇಡ್ಕರ್ ಎಲ್ಲ ಜನಾಂಗಗಳ ಸ್ವತ್ತು. ಅವರು ನೊಂದವರ ಧ್ವನಿಯಾಗಿ, ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದರು” ಎಂದು ಹೇಳಿದರು. ಅಂಬೇಡ್ಕರ್ ಅವರನ್ನು ಪ್ರತಿದಿನ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈಶ್ವರನ್, ನಂಜುಂಡಯ್ಯ, ಎಂ.ಆರ್. ನಾಗೇಶ್, ರವಿಚಂದ್ರ, ಮಣಿಕಂಠ, ಕೃಷ್ಣಮೂರ್ತಿ, ಸಿ.ಎಂ. ಶಿವಕುಮಾರ್, ಯಶೋಧ, ಜವರಯ್ಯ, ರಾಮಕೃಷ್ಣ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಜೆ.ಎಸ್. ಶಂಕರಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಕಾರ್ಯಪಾಲಕ ಇಂಜಿನಿಯರ್ ಆನಂದ್, ಪುರಸಭೆ ಮುಖ್ಯಾಧಿಕಾರಿ ಯತೀಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.