ಕಲೆ ಕೇವಲ ಬಣ್ಣಗಳ ಸಂಯೋಜನೆಯಲ್ಲ; ಅದು ಸಮಾಜ, ಪ್ರಕೃತಿ ಮತ್ತು ಮನುಷ್ಯನ ಬದುಕಿನೊಂದಿಗೆ ಸಂವಾದ ನಡೆಸುವ ಪ್ರಬಲ ಮಾಧ್ಯಮ. ಈ ನಂಬಿಕೆಯೊಂದಿಗೆ ತಮ್ಮ ಕಲಾ ಮಾಧ್ಯಮವನ್ನು ಬಹುಮುಖಿಯಾಗಿ ರೂಪಿಸಿಕೊಂಡು ಪ್ರಬುದ್ಧ ಕಲಾವಿದನಾಗಿ ಬೆಳೆಯುತ್ತಿರುವವರು ಹಾಸನದ ಯುವ ದೃಶ್ಯ ಕಲಾವಿದ ಕೃಷ್ಣಚಾರಿ. ಚಿತ್ರಕಲೆ, ಶಿಲ್ಪಕಲೆ, ಪ್ರತಿಷ್ಠಾಪನ ಕಲೆ ಹಾಗೂ ನೈಸರ್ಗಿಕ ವಸ್ತುಗಳ ಬಳಕೆಯ ಮೂಲಕ ವಿಭಿನ್ನ ಕಲಾ ಪ್ರಯೋಗಗಳನ್ನು ನಡೆಸುತ್ತಾ ರಾಜ್ಯ ಮಾತ್ರವಲ್ಲದೆ ದೇಶದ ಕಲಾಸಕ್ತರ ಗಮನ ಸೆಳೆಯುತ್ತಿದ್ದಾರೆ.

ಕೃಷ್ಣಚಾರಿಯವರಿಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ. ಹಾಸನದ ನಿರ್ಮಲಾ ಸ್ಕೂಲ್ ಆಫ್ ಆರ್ಟ್ನಲ್ಲಿ ಬಿ.ವಿ.ಎ. ಪದವಿ ಪಡೆದ ಅವರು, ಕಲಬುರಗಿಯ ಎಂ.ಎಂ.ಕೆ. ಕಾಲೇಜ್ ಆಫ್ ವಿಷುವಲ್ ಆರ್ಟ್ಸ್ನಲ್ಲಿ ಸ್ನಾತಕೋತ್ತರ ಕಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ನಂತರ ಪ್ರಖ್ಯಾತ ಕಲಾವಿದ ಅರುಣ್ ಕುಮಾರ್ ಎಚ್.ಜಿ. ಅವರ ಸಹಾಯಕರಾಗಿ ದೆಹಲಿಯಲ್ಲಿ ಕಾರ್ಯನಿರ್ವಹಿಸಿ ಕಲಾ ಕ್ಷೇತ್ರದ ವೈವಿಧ್ಯಮಯ ಅನುಭವವನ್ನು ಪಡೆದುಕೊಂಡಿದ್ದಾರೆ.

ಪ್ರಕೃತಿ, ಪರಿಸರ, ಜೀವವೈವಿಧ್ಯ, ಮಲೆನಾಡಿನ ಭೂದೃಶ್ಯ, ಮಣ್ಣಿನ ನೆನಪು ಹಾಗೂ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲುವ ಇವರ ಕಲಾಕೃತಿಗಳು ಪರಿಸರ ಪ್ರಿಯರಿಗೆ ಅತ್ಯಂತ ಆಪ್ತವಾಗಿವೆ. ಮಣ್ಣು, ಕಲ್ಲು, ಬಿದಿರು, ಮರ, ಇದ್ದಿಲು, ನೈಸರ್ಗಿಕ ಬಣ್ಣಗಳು, ಕೈಯಿಂದ ತಯಾರಿಸಿದ ಕಾಗದ, ಖಾದಿ ಬಟ್ಟೆ ಸೇರಿದಂತೆ ಅನುಪಯುಕ್ತ ಹಾಗೂ ನೈಸರ್ಗಿಕ ವಸ್ತುಗಳನ್ನು ಕಲಾ ಮಾಧ್ಯಮವಾಗಿ ಬಳಸುವ ಮೂಲಕ ತಮ್ಮದೇ ಆದ ವಿಶಿಷ್ಟ ಕಲಾಭಾಷೆಯನ್ನು ರೂಪಿಸಿಕೊಂಡಿದ್ದಾರೆ.
ಈ ಯುವ ಕಲಾವಿದನ ಕಲಾ ಪಯಣದಲ್ಲಿ “ರೂಟ್ಸ್ ಆಫ್ ಸಾಯಿಲ್” (Roots of Soil) ಏಕವ್ಯಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು, ಕಲಾ ಶಿಬಿರಗಳು ಹಾಗೂ ರಾಷ್ಟ್ರಮಟ್ಟದ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಡೆದ ಅನುಭವಗಳು ಅವರ ಪ್ರಯೋಗಾತ್ಮಕ ಕಲಾಕೃತಿಗಳ ರೂಪುಗೊಳ್ಳುವಿಕೆಗೆ ಪ್ರೇರಣೆಯಾಗಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರದರ್ಶನದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಪ್ರಶಸ್ತಿಯನ್ನೂ ಪಡೆದಿರುವ ಅವರು, ವಿವಿಧ ಕಲಾ ಶಿಬಿರ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಕಲೆಯ ಆಳಕ್ಕೆ ಇಳಿಯುವ ಉತ್ಸುಕತೆಯನ್ನು ನಿರಂತರವಾಗಿ ಉಳಿಸಿಕೊಂಡಿದ್ದಾರೆ.

ಕಲೆಯನ್ನು ಕೇವಲ ತಮ್ಮ ವೃತ್ತಿಯಾಗಿ ಪರಿಗಣಿಸದೆ, ಸಮಾಜಮುಖಿ ಚಿಂತನೆ ಹಾಗೂ ಪರಿಸರ ಕಾಳಜಿಯನ್ನು ಜನರೊಂದಿಗೆ ಹಂಚಿಕೊಳ್ಳುವ ಜವಾಬ್ದಾರಿಯುತ ಮಾಧ್ಯಮವಾಗಿಯೂ ಬಳಸುತ್ತಿದ್ದಾರೆ. “ಆರ್ಟ್ ರೂಟ್ ಸ್ಟುಡಿಯೋ, ಹಾಸನ” ಮೂಲಕ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಕಲಾಸಕ್ತರಿಗೆ ಚಿತ್ರಕಲೆ ಮತ್ತು ಸೃಜನಾತ್ಮಕ ಕಲೆಯ ತರಬೇತಿ ನೀಡುತ್ತಿದ್ದಾರೆ. ಚಿತ್ರಕಲಾ ತರಗತಿಗಳ ಜತೆಗೆ ವಿವಿಧ ಕಲಾ ಕಾರ್ಯಾಗಾರಗಳು, ಮಕ್ಕಳ ಕಲಾ ಶಿಬಿರಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಹಾಗೂ ಕಲಾ ಪ್ರವಾಸಗಳನ್ನು ಆಯೋಜಿಸುತ್ತಿದ್ದಾರೆ.
ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುವುದರ ಜತೆಗೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ಕಾಳಜಿ ಹಾಗೂ ಅರಿವು ಮೂಡಿಸುವುದೇ ತಮ್ಮ ಕಾರ್ಯೋದ್ದೇಶ ಎಂದು ಕೃಷ್ಣಚಾರಿ ಹೇಳುತ್ತಾರೆ. ದೇವಾಲಯಗಳು, ಗ್ರಾಮೀಣ ಬದುಕು, ಹಳ್ಳಿಗಾಡಿನ ಸೊಬಗು-ಸೌಂದರ್ಯ, ನಿಸರ್ಗ ಹಾಗೂ ಹಸಿರು ಪರಿಸರವನ್ನು ಕಲಾ ಚಟುವಟಿಕೆಗಳೊಂದಿಗೆ ಜೋಡಿಸುವ ಮೂಲಕ ಮಕ್ಕಳಿಗೆ ನೇರ ಅನುಭವ ನೀಡುವುದು ಮತ್ತು ಅನುಭವದ ಮೂಲಕ ಕಲಿಯುವ ಅವಕಾಶ ಕಲ್ಪಿಸುವುದು ತಮ್ಮ ಕಲಿಕಾ ಕ್ರಮದ ಪ್ರಮುಖ ಉದ್ದೇಶವಾಗಿದೆ ಎನ್ನುತ್ತಾರೆ.
“ನಮ್ಮ ಸುತ್ತಲಿನ ಮಣ್ಣು, ಮರ, ನೀರು, ಕಲ್ಲು, ಬೀಜ ಸೇರಿದಂತೆ ಪ್ರಕೃತಿಯ ಪ್ರತಿಯೊಂದು ಅಂಶವೂ ಒಂದೊಂದು ಕಥೆಯನ್ನು ಹೇಳುತ್ತವೆ. ಆ ಕಥೆಯನ್ನು ಕಲೆಯ ಮೂಲಕ ದಾಖಲಿಸುವುದೇ ನನ್ನ ಸೃಜನಶೀಲ ಪ್ರಯತ್ನ” ಎಂಬುದು ಕೃಷ್ಣಚಾರಿ ಅವರ ಕಲಾ ಚಿಂತನೆಯ ಸಾರವಾಗಿದೆ.
ಹಾಸನದಲ್ಲಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು, ಉತ್ತಮ ಕಲಾ ಗ್ಯಾಲರಿಗಳು ನಿರ್ಮಾಣವಾಗಬೇಕು ಹಾಗೂ ಸ್ಥಳೀಯ ಕಲಾವಿದರ ಕಲಾ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ವೇದಿಕೆ ದೊರೆಯಬೇಕು ಎಂಬುದು ಅವರ ಆಶಯವಾಗಿದೆ.
ತಮ್ಮದೇ ಆದ ವಿಶಿಷ್ಟ ಕಲಾಭಾಷೆಯನ್ನು ರೂಪಿಸಿಕೊಂಡು ಕಲೆ, ಪ್ರಕೃತಿ ಮತ್ತು ಸಮಾಜವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಪ್ರಯತ್ನ ಮಾಡುತ್ತಿರುವ ಯುವ ಕಲಾವಿದ ಕೃಷ್ಣಚಾರಿ ಅವರ ಕಲಾ ಪಯಣ ಇನ್ನಷ್ಟು ಯಶಸ್ಸಿನತ್ತ ಸಾಗಲಿ ಎಂಬುದು ಕಲಾಸಕ್ತರ ಶುಭ ಹಾರೈಕೆಯಾಗಿದೆ.
ಗೊರೂರು ಅನಂತರಾಜು, ಹಾಸನ ಮೊ: 9449462879
