ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂಭೇನಹಳ್ಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಎಚ್.ಡಿ. ರೇವಣ್ಣ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕುಂಭೇನಹಳ್ಳಿ ಗ್ರಾಮ ಪಂಚಾಯಿತಿ ಸಮೀಪ ₹25 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆ ಹಾಗೂ ₹10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಈ ಎರಡೂ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್.ಡಿ. ರೇವಣ್ಣ, ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ₹25 ಲಕ್ಷ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಭಾಗದ ಗ್ರಾಮಗಳ ರೈತರ ಅನುಕೂಲಕ್ಕಾಗಿ ₹5 ಕೋಟಿ ವೆಚ್ಚದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮುಂದಿನ ತಿಂಗಳೊಳಗೆ ಕೆಇಬಿ ಉಪಕೇಂದ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕುಂಭೇನಹಳ್ಳಿ ಗ್ರಾಮ ಹಾಗೂ ಅಗ್ರಹಾರ ಗೇಟ್ನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಈ ಶಾಲೆಗಳಲ್ಲಿ ಒಂದನೇ ತರಗತಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಸನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ತಮ್ಮ ತಂದೆ ಎಚ್.ಡಿ. ರೇವಣ್ಣ ಅವರಿಗೆ ರಾಜಕೀಯ ಶಕ್ತಿ ತುಂಬಿದ ಈ ಭಾಗದ ರೈತರ ಏಳಿಗೆಗಾಗಿ ತಮ್ಮ ಕುಟುಂಬ ಸದಾ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.
ಹಾಸನ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಭಾಗದ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಪಶು ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಅಲ್ಲದೆ, ಬಡ ರೈತರ ಮಕ್ಕಳ ವಿವಾಹ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ₹5 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡರಾದ ಹೂನ್ನಶೆಟ್ಟಿಹಳ್ಳಿ ದೀಪು, ಯಲ್ಲಿಯೂರು ಕೊಪ್ಪಲು ವಿಕಾಸ್, ಆನೆಕೆರೆ ಬಾಲಣ್ಣ, ಮಾಜಿ ಪುರಸಭಾ ಅಧ್ಯಕ್ಷ ಕೆ.ಜೆ. ಸುರೇಶ್, ಜೆಡಿಎಸ್ ಮುಖಂಡರಾದ ಕುಂಭೇನಹಳ್ಳಿ ದಿಲೀಪ್, ವಾಸು, ರವಿ, ಮಧು, ರಂಗಸ್ವಾಮಿ, ಅಗ್ರಹಾರ ದಿನೇಶ್, ಅಗ್ರಹಾರ ಕೊಪ್ಪಲು ಪ್ರಭಾಕರ್, ಚೋಳನಹಳ್ಳಿ ಮಂಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಐ ಕೆ ಮಂಜುನಾಥ್
