ದಾವಣಗೆರೆ: ನಗರದ ಗುರುಭವನದಲ್ಲಿ ಭಾನುವಾರ ಬಂಜಾರಾ ಉತ್ಸವ–2026 ಅದ್ದೂರಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ), ಹೂವಿನಹಡಗಲಿ ಹಾಗೂ ಬಂಜಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲಾ ಬಂಜಾರಾ (ಲಂಬಾಣಿ) ನೌಕರರ ಕಲ್ಯಾಣಾಭಿವೃದ್ಧಿ ಸಂಘ ಸಹಯೋಗ ನೀಡಿತ್ತು.
ಉತ್ಸವದಲ್ಲಿ ಬಂಜಾರ ಜನಾಂಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವತ್ತು ಮಹಿಳಾ ಸಾಧಕಿಯರಿಗೆ ‘ಬಂಜಾರಾ ಸಾಧಕಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಸಾಂಪ್ರದಾಯಿಕ ಬಂಜಾರಾ ಟೋಪಿ ಧರಿಸಿ, ಪ್ರಶಸ್ತಿ ಪತ್ರಗಳನ್ನು ಹಿಡಿದು ಸಂಭ್ರಮಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಬಂಜಾರ ಜನಾಂಗದ ಸಂಸ್ಕೃತಿ, ಭಾಷೆ, ಸಾಹಿತ್ಯ ಹಾಗೂ ಭಕ್ತಿ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಉತ್ಸವದ ಪ್ರಮುಖ ಉದ್ದೇಶವಾಗಿತ್ತು.
“ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ಸಾಹಿತ್ಯ ನಮ್ಮ ಬೇರು” ಎಂಬ ಸಂದೇಶವನ್ನು ಸಾರಿದ ಈ ಉತ್ಸವ ಕೇವಲ ಒಂದು ಕಾರ್ಯಕ್ರಮವಾಗಿ ಸೀಮಿತವಾಗದೆ, ಯುವಪೀಳಿಗೆಗೆ ತಮ್ಮ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಮಹತ್ವದ ವೇದಿಕೆಯಾಗಿ ಮೂಡಿಬಂತು.
ಇಂತಹ ಅವಿಸ್ಮರಣೀಯ ವೇದಿಕೆಯನ್ನು ಕಲ್ಪಿಸಿಕೊಟ್ಟ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಹಾಗೆಯೇ ಚಿತ್ರದುರ್ಗದ ಕನ್ನಡ ಮತ್ತು ಬಂಜಾರ ಭಾಷೆಯ ಲೇಖಕಿ ಶ್ರೀಮತಿ ಭಾಗ್ಯ ನಾಗರಾಜ ಬಂಜಾರ ಅವರಿಗೆ ‘ಬಂಜಾರ ಸಾಧಕಿ–2026’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಬಂಜಾರ ಸಮುದಾಯದ ಸಾಂಸ್ಕೃತಿಕ ವೈಭವ, ಸಾಹಿತ್ಯಿಕ ಪರಂಪರೆ ಮತ್ತು ಸಾಧಕರ ಕೊಡುಗೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಬಂಜಾರಾ ಉತ್ಸವ–2026, ಭಾಗವಹಿಸಿದವರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.
ವರದಿ : ಗೊರೂರು ಅನಂತಸ್ವಾಮಿ
