ಬೆಂಗಳೂರು : ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ “ಲೋ ನವೀನ” ಸಿನಿಮಾಗೆ ಇದೀಗ ದೊಡ್ಮನೆ ಕುಟುಂಬದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರವನ್ನು ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್, ಚಿತ್ರತಂಡದೊಂದಿಗೆ ಮಾತುಕತೆ ನಡೆಸಿ ಅಭಿನಂದನೆ ಸಲ್ಲಿಸಿದ್ದಾರೆ.
ಚಿತ್ರದ ಕಥಾಹಂದರ, ಸಹಜ ಅಭಿನಯ ಹಾಗೂ ಮನರಂಜನಾತ್ಮಕ ನಿರೂಪಣೆಯನ್ನು ಶ್ಲಾಘಿಸಿದ ಅವರು, “ಸರಳ ಕಥೆಯನ್ನು ಜನರ ಮನಸ್ಸಿಗೆ ತಲುಪುವ ರೀತಿಯಲ್ಲಿ ಹೇಳಿರುವುದು ಚಿತ್ರದ ದೊಡ್ಡ ಶಕ್ತಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಟ ನವೀನ್ ಸಜ್ಜು ಹಾಗೂ ಚಿತ್ರತಂಡದ ಪರಿಶ್ರಮವನ್ನು ಮೆಚ್ಚಿದ ಅಶ್ವಿನಿ ಪುನೀತ್ ರಾಜ್ಕುಮಾರ್, ಮುಂದಿನ ದಿನಗಳಲ್ಲಿ ಚಿತ್ರ ಇನ್ನಷ್ಟು ಯಶಸ್ಸು ಕಾಣಲು ಬೇಕಾದ ಸಲಹೆಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ.

ಮಂಡ್ಯ ಶೈಲಿಯ ಭಾಷೆ ಹಾಗೂ ನೈಜ ಜೀವನಕ್ಕೆ ಹತ್ತಿರವಾಗಿರುವ ಪಾತ್ರಗಳು ಚಿತ್ರದ ವಿಶೇಷತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. “ಕನ್ನಡ ಚಿತ್ರರಂಗಕ್ಕೆ ನಿಮ್ಮಂತಹ ಪ್ರತಿಭಾವಂತ ಯುವ ಕಲಾವಿದರು ಅಗತ್ಯ” ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಿನಿಮಾ ಬಿಡುಗಡೆಯಾದ ಬಳಿಕ ದಿನದಿಂದ ದಿನಕ್ಕೆ ಪ್ರೇಕ್ಷಕರ ಮೆಚ್ಚುಗೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದೊಡ್ಮನೆ ಕುಟುಂಬದಿಂದ ವ್ಯಕ್ತವಾದ ಪ್ರಶಂಸೆ “ಲೋ ನವೀನ” ಚಿತ್ರತಂಡಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.
