ರಾಮನಾಥಪುರ, ಮೇ 25 (RNP): ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಐದು ದಿನಗಳ ಕಾಲ ನಡೆದ 23ನೇ ವಾರ್ಷಿಕ ಸಂಗೀತೋತ್ಸವವು ಭಾನುವಾರ ವೈಭವದಿಂದ ಸಮಾಪ್ತಿಗೊಂಡಿತು. ಖ್ಯಾತ ವೈಲಿನ್ ವಿದ್ವಾಂಸರಾದ ಮೈಸೂರು ಮಂಜುನಾಥ್ ಮತ್ತು ಮಾಳವಿ ಮಂಜುನಾಥ್ ಅವರ ಯುಗಳ ವೈಲಿನ್ ವಾದನ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮವೆಂದೇ ಖ್ಯಾತಿ ಪಡೆದಿರುವ ರುದ್ರಪಟ್ಟಣ ಕಳೆದ ಐದು ದಿನಗಳಿಂದ ಸಂಗೀತದ ಮಧುರ ಸ್ವರಗಳಿಂದ ಕಂಗೊಳಿಸಿತು. ಜಿಲ್ಲೆ, ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಗೀತ ಪ್ರಿಯರು ಕಾರ್ಯಕ್ರಮಗಳನ್ನು ಆಲಿಸಿ ಸಂತೃಪ್ತಿಗೊಂಡರು.

ಸಂಗೀತೋತ್ಸವದ ಅಂಗವಾಗಿ ವಿಶ್ವವಿಖ್ಯಾತ ತಂಬೂರಿಯಾಕಾರದ ಸಪ್ತಸ್ವರ ದೇವಾಲಯ ಹಾಗೂ ದ್ವಾದಶ ಸ್ವರಸ್ಥಂಭ ಮಂಟಪಗಳು ವಿಶೇಷ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿ ಗಮನ ಸೆಳೆದವು.
ಕೊನೆಯ ದಿನ ಬೆಳಿಗ್ಗೆ ಶ್ರೀ ಚನ್ನಕೇಶವಸ್ವಾಮಿಯ ರಥೋತ್ಸವ ಭಕ್ತಿಭಾವದಿಂದ ಜರುಗಿತು. ದೇವಾಲಯದಿಂದ ಹೊರಟ ರಥವು ರಥಬೀದಿಯಲ್ಲಿ ಸಂಚರಿಸಿ ಮರಳಿ ಸ್ವಸ್ಥಾನ ತಲುಪಿತು. ರಥದ ಮುಂಭಾಗದಲ್ಲಿ ವಿದ್ವಾನ್ ಆರ್.ಕೆ. ಪದ್ಮನಾಭ ಸೇರಿದಂತೆ ಅನೇಕ ಕಲಾವಿದರು ಮತ್ತು ಸ್ಥಳೀಯರು ಭಜನೆ ಹಾಗೂ ಕೀರ್ತನೆಗಳನ್ನು ಹಾಡುತ್ತಾ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದು ವಿಶೇಷ ಆಕರ್ಷಣೆಯಾಯಿತು.

ಸಂಜೆ ನಡೆದ ಸಮಾರೋಪ ಸಂಗೀತ ಕಾರ್ಯಕ್ರಮದಲ್ಲಿ ಮೈಸೂರು ಮಂಜುನಾಥ್ ಮತ್ತು ಮಾಳವಿ ಮಂಜುನಾಥ್ ಅವರ ಯುಗಳ ವೈಲಿನ್ ವಾದನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮುತ್ತುಸ್ವಾಮಿ ದೀಕ್ಷಿತರ “ಮಹಾಗಣಪತಿಂ”, ಸ್ವಾತಿ ತಿರುನಾಳರ “ಮಾಮವ ಸದಾ”, ಶ್ಯಾಮಶಾಸ್ತ್ರಿಯವರ “ಸರೋಜದಳ” ಹಾಗೂ “ಎಂತ ಮುದ್ದೋ” ಸೇರಿದಂತೆ ಅನೇಕ ಪ್ರಸಿದ್ಧ ಕೃತಿಗಳನ್ನು ಮನಮುಟ್ಟುವಂತೆ ನುಡಿಸಿ ರಸಿಕರನ್ನು ರಂಜಿಸಿದರು.

ಈ ಬಾರಿ ಸಂಗೀತ ಕಾರ್ಯಕ್ರಮಗಳ ಜೊತೆಗೆ ಹಾಸ್ಯ ಹರಟೆ, ಸಂದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಗೀತೋತ್ಸವಕ್ಕೆ ಹೊಸ ಮೆರುಗು ತಂದಿತು.
