ಶ್ರೀ ರಾಮ್ ಜನರಲ್ ಇನ್ಷುರನ್ಸ್ ಮತ್ತು ಪಿರಮಲ್ ಫೈನಾನ್ಸ್ ಭಾರತದಲ್ಲಿ ವಿಮಾ ರಕ್ಷಣೆಯನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಮಹತ್ವದ ಕಾರ್ಪೊರೇಟ್ ಏಜೆನ್ಸಿ ಪಾಲುದಾರಿಕೆಯನ್ನು ಘೋಷಿಸಿವೆ. ಈ ಸಹಭಾಗಿತ್ವದ ಮೂಲಕ ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ವಿಮಾ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ಈ ಒಪ್ಪಂದದಡಿ, ಪಿರಮಲ್ ಫೈನಾನ್ಸ್ನ 701 ಶಾಖೆಗಳ ವ್ಯಾಪಕ ಜಾಲವನ್ನು ಬಳಸಿಕೊಂಡು ಶ್ರಿರಾಮ್ ಜನರಲ್ ಇನ್ಷುರನ್ಸ್ ತನ್ನ ವಿವಿಧ ವಿಮಾ ಉತ್ಪನ್ನಗಳನ್ನು ದೇಶದ 26 ರಾಜ್ಯಗಳು ಹಾಗೂ 13,000ಕ್ಕೂ ಹೆಚ್ಚು ಪಿನ್ಕೋಡ್ ಪ್ರದೇಶಗಳ ಗ್ರಾಹಕರಿಗೆ ತಲುಪಿಸಲಿದೆ. ಈ ಸಹಭಾಗಿತ್ವವು ಗ್ರಾಹಕರ ಆಸ್ತಿ, ಜೀವನೋಪಾಯ ಮತ್ತು ದೀರ್ಘಕಾಲಿಕ ಆರ್ಥಿಕ ಭದ್ರತೆಯನ್ನು ಕಾಪಾಡಲು ಸಹಕಾರಿಯಾಗಲಿದೆ.
ಪಿರಮಲ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜೈರಾಮ್ ಶ್ರೀಧರನ್ ಮಾತನಾಡಿ, “ಭಾರತದ ಅನೇಕ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ವ್ಯಾಪ್ತಿ ಇನ್ನೂ ಕಡಿಮೆ ಇದೆ. ಅಪ್ರತೀಕ್ಷಿತ ಘಟನೆಗಳು ಕುಟುಂಬಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ನೀಡಬಹುದು. ಆದ್ದರಿಂದ ವಿಮೆ ಕೇವಲ ಒಂದು ಉತ್ಪನ್ನವಲ್ಲ, ಅದು ಜನರ ಶ್ರಮದ ಫಲವನ್ನು ರಕ್ಷಿಸುವ ಭದ್ರತಾ ಕವಚವಾಗಿದೆ. ನಮ್ಮ ಶಾಖಾ ಜಾಲ ಮತ್ತು ಸ್ಥಳೀಯ ಸಂಪರ್ಕದ ಮೂಲಕ ಸರಳ ಹಾಗೂ ವಿಶ್ವಾಸಾರ್ಹ ವಿಮಾ ಪರಿಹಾರಗಳನ್ನು ಜನರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಶ್ರಿರಾಮ್ ಜನರಲ್ ಇನ್ಷುರನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಎಮೊ ಅಫ್ತಾಬ್ ಅಲ್ವಿ ಮಾತನಾಡಿ, “ಈ ಪಾಲುದಾರಿಕೆ ಮೂಲಕ ವಿಮಾ ಸೇವೆಗಳನ್ನು ಇನ್ನಷ್ಟು ವ್ಯಾಪಕವಾಗಿ ತಲುಪಿಸುವ ಅವಕಾಶ ದೊರಕಿದೆ. ವಿಮಾ ಪ್ರವೇಶ ಕಡಿಮೆ ಇರುವ ಪ್ರದೇಶಗಳಲ್ಲಿ ಜನರಿಗೆ ಆರ್ಥಿಕ ರಕ್ಷಣೆಯ ಮಹತ್ವವನ್ನು ತಿಳಿಸಿ, ಉತ್ತಮ ಸೇವೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈ ಸಹಭಾಗಿತ್ವವು ವಿಮಾ ಕ್ಷೇತ್ರದಲ್ಲಿ ಸಮಗ್ರ ಬೆಳವಣಿಗೆ ಮತ್ತು ಹಣಕಾಸು ಭದ್ರತೆಯನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ” ಎಂದು ಹೇಳಿದರು.
