ಶ್ಲೋಕ – 05
ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್ಗಚ್ಛನ್ತ್ಯಮೂಢಾಃ ಪದಮವ್ಯಯಂ ತತ್ ॥೫॥
ನಿರ್ಮಾನಮೋಹಾಃ ಜಿತ ಸಂಗ ದೋಷಾಃ ಅಧ್ಯಾತ್ಮ ನಿತ್ಯಾಃ ವಿನಿವೃತ್ತಕಾಮಾಃ ।
ದ್ವಂದ್ವೈಃ ವಿಮುಕ್ತಾಃ ಸುಖ ದುಃಖ ಸಂಜ್ಞೈಃ ಗಚ್ಛಂತಿ ಅಮೂಢಾಃ ಪದಮ್ ಅವ್ಯಯಮ್ ತತ್—ಬಿಂಕವಿರದವರು, ಮೋಹವಳಿದವರು, ಬಯಕೆಗಳನ್ನು ಬಿಟ್ಟವರು, ಸುಖ-ದುಃಖಗಳೆಂಬ ಇಕ್ಕಟ್ಟಿನ ಇರುಕನ್ನು ಮೀರಿ ನಿಂತವರು- ಇಂಥ ಜಾಣರು ಈ ಅಳಿವಿರದ ತಾಣವನ್ನು ಸೇರುತ್ತಾರೆ.
ಕೃಷ್ಣ ಈ ಶ್ಲೋಕದಲ್ಲಿ ಹೇಳಿರುವ ವಿಚಾರ ಈ ಹಿಂದಿನ ಅನೇಕ ಅಧ್ಯಾಯಗಳಲ್ಲಿ ಅಲ್ಲಲ್ಲಿ ಬಂದಿದೆ ಮತ್ತು ಬಂದಾಗ ನಾವು ಆ ಬಗ್ಗೆ ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದೇವೆ. ಎಲ್ಲವನ್ನು ಸಮಷ್ಟಿಯಾಗಿ ಇಲ್ಲಿ ಕೃಷ್ಣ ಹೇಳಿದ್ದಾನೆ. ಭಗವಂತನಲ್ಲಿ ಶರಣಾಗತಿಬೇಡಿ ಸಾಗುವ ನಮ್ಮ ಜೀವನದ ನಡೆ ಹೇಗಿರಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. “ಎಲ್ಲಕ್ಕಿಂತ ಮೊದಲು ಮಾನ-ಮೋಹವನ್ನು ಬಿಡಬೇಕು” ಎನ್ನುತ್ತಾನೆ ಕೃಷ್ಣ. ಅಂದರೆ ‘ನಾನು’ ಎನ್ನುವ ‘ಅಹಂಕಾರ’ ಮತ್ತು ‘ನನ್ನದು’ ಎನ್ನುವ ‘ಮಮಕಾರ’ ಇವೆರಡನ್ನು ನಾವು ಮೊದಲು ತೊರೆಯಬೇಕು. ಈ ಪ್ರಪಂಚಕ್ಕೆ ಬರುವಾಗಲೂ ನಾವು ಬತ್ತಲೆ, ಹೋಗುವಾಗಲೂ ಬತ್ತಲೆ. ಹೀಗಿರುವಾಗ ಇಲ್ಲಿ ‘ನಾನು’, ‘ನನ್ನದು’ ಎಂದು ಅಹಂಕಾರ-ಮಮಕಾರದಲ್ಲಿ ಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ. ಸಂಗದೋಷ ನಮ್ಮ ಮೇಲೆ ಅನೇಕ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ನಾವು ಸಂಗದೋಷವನ್ನು ಗೆಲ್ಲಬೇಕು. ಒಂದು ವಸ್ತುವಿನ ಅತಿಯಾದ ಒಡನಾಟ, ಅದರ ಮೇಲಿನ ಅತಿಯಾದ ಮಮಕಾರ ಎಂದೆಂದಿಗೂ ಒಳ್ಳೆಯದಲ್ಲ. ಈ ರೀತಿ ನಿರ್ಲಿಪ್ತತೆಯಿಂದ ಬದುಕಬೇಕಾದರೆ ಮೊದಲು ನಮ್ಮನ್ನು ನಾವು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಯಕೆಗಳನ್ನು ಬಿಟ್ಟು, ಸುಖ ಬಂದಾಗ ಹಾರಾಡದೆ, ದುಃಖ ಬಂದಾಗ ಕುಗ್ಗದೆ, ದ್ವಂದ್ವಾತೀತರಾಗಿ ಬದುಕುವುದನ್ನು ನಾವು ಕಲಿಯಬೇಕು. ಸೋಲೇ ಗೆಲುವಿನ ಮೆಟ್ಟಿಲು, ದುಃಖ-ಸುಖದ ಮೆಟ್ಟಿಲು. ಹಗಲು-ರಾತ್ರಿಯನ್ನು ಸ್ವೀಕರಿಸಿದಂತೆ ಕಷ್ಟ-ಸುಖವನ್ನು ನಾವು ಸಮನಾಗಿ ಸ್ವೀಕರಿಸಬೇಕು. ಲೌಕಿಕ ನಿರೀಕ್ಷೆ-ನಿರಾಶೆಯ ಮೂಲ. ಇದರ ಹಿಂದೆ ಹೋದವರು ತಿಳಿಗೇಡಿಗಳು. ಅವರು ತಾವೇ ತಾವಾಗಿ ತಮ್ಮ ಜೀವನದಲ್ಲಿ ಸಮಸ್ಯೆಯನ್ನು ತಂದುಕೊಳ್ಳುತ್ತಾರೆ. ಆದರೆ ಈ ಮರ್ಮವನ್ನು ಅರಿತ ಜ್ಞಾನಿಗಳು ಭಗವಂತನ ಲೋಕವನ್ನು ನಿರಾಯಾಸವಾಗಿ ಸೇರುತ್ತಾರೆ-ಇದು ನಿಶ್ಚಿತ.
ದೇವರ ಬಗ್ಗೆ ದೇವರನ್ನು ನಂಬುವವರಲ್ಲೇ ಅನೇಕ ಅಭಿಪ್ರಾಯ ಭೇದಗಳಿವೆ. ಪ್ರತಿಯೊಬ್ಬರಿಗೂ ತಮ್ಮ ವಿಚಾರಧಾರೆಯೇ ಸರಿ ಎನ್ನುವ ಭಾವನೆ ಇರುತ್ತದೆ. ಇದಕ್ಕಾಗಿ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಈ ಕುರಿತ ವಿವರಣೆಯನ್ನು ಕೊಡುತ್ತಾನೆ. ಇಲ್ಲಿ ಪ್ರಸ್ತುತವಿರುವ ಶ್ಲೋಕಗಳಲ್ಲಿ ಇರುವ ವಿಚಾರ ನಮಗೆ ಸ್ವಲ್ಪ ಅಸ್ಪಷ್ಟವಾಗಿ ಕಾಣಬಹುದು. ನಮ್ಮ ಸಾಧನೆ ಮತ್ತು ನಮ್ಮ ಯೋಗ್ಯತೆಗನುಗುಣವಾಗಿ ಈ ಶ್ಲೋಕಗಳು ತೆರೆದುಕೊಳ್ಳುತ್ತವೆ. ಇಲ್ಲಿ ಕೃಷ್ಣ ಜೀವ-ಜಗತ್ತು-ಭಗವಂತ ಈ ತ್ರಿಪುಟಿಗಳ ಕಲ್ಪನೆಯನ್ನು ಬಹಳ ರೋಚಕವಾಗಿ ವಿವರಿಸಿದ್ದಾನೆ.
ಭಗವಂತನ ಚಿಂತನೆಯಲ್ಲಿ ಕಾಳಜಿ ಇರುವವರಿಗೆ ಈ ಅಧ್ಯಾಯದ ಮುಂದಿನ ಭಾಗ ಬಹಳ ಮುಖ್ಯವಾಗುತ್ತದೆ. ನಮ್ಮ ಜೀವನದಲ್ಲಿ ನಾವು ಹೇಗೆ ಸಾಧನೆ ಮಾಡಬೇಕು, ಹೇಗೆ ಭಗವಂತನ ಚಿಂತನೆ ಮಾಡಬೇಕು ಅನ್ನುವುದರ ಸಮಸ್ತ ಸಾರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ.
