ಬೇಲೂರು: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಬಿಜೆಪಿ ಮಹಿಳಾ ಘಟಕದ ವತಿಯಿಂದ ಶಾಸಕ ಎಚ್. ಕೆ. ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆ ಬಳಿಕ ಮಾತನಾಡಿದ ಶಾಸಕ ಸುರೇಶ್, “ದೇಶದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲು ಮುಂದಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ರಾಜಕೀಯ ದುರುದ್ದೇಶದಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ,” ಎಂದು ಆರೋಪಿಸಿದರು.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವ ಸಂದರ್ಭದಲ್ಲಿ, ಅವರು ಲೋಕಸಭೆ ಮತ್ತು ವಿಧಾನಸಭೆಗೂ ಆಯ್ಕೆಯಾಗುವ ಅವಕಾಶ ಪಡೆಯಬೇಕು. “ಮಹಿಳೆಯರ ಪ್ರತಿನಿಧಿತ್ವ ಕೇವಲ ಸ್ಥಳೀಯ ಸಂಸ್ಥೆಗಳ ಮಟ್ಟಕ್ಕೆ ಸೀಮಿತವಾಗಬಾರದು,” ಎಂದು ಅವರು ಹೇಳಿದರು.
“ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಮಾತ್ರ ಅವಕಾಶ ಸೀಮಿತವಾಗಬೇಕೇ? ದೇಶದ ಸಾಮಾನ್ಯ ಮಹಿಳೆಯರು ತಮ್ಮ ಹಕ್ಕುಗಳನ್ನು ಸಂಸತ್ತಿನಲ್ಲಿ ಮಂಡಿಸಬಾರದೇ?” ಎಂದು ಪ್ರಶ್ನಿಸಿದರು. ಕಾಂಗ್ರೆಸ್ ತನ್ನ ನಿಲುವು ತಿದ್ದುಕೊಂಡು ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡೆ ಬಿ.ಕೆ. ಚಂದ್ರಕಲಾ ಮಾತನಾಡಿ, 12ನೇ ಶತಮಾನದಲ್ಲೇ ಬಸವಣ್ಣ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ ಉದಾಹರಣೆಯನ್ನು ಉಲ್ಲೇಖಿಸಿದರು. ಅದೇ ರೀತಿ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಮಾನತೆಗೆ ಒತ್ತು ನೀಡಿದ್ದರು ಎಂದು ಹೇಳಿದರು. ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಬಸವರಾಜು ಮಾತನಾಡಿ, “ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಿನ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ಮೀಸಲಾತಿ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ,” ಎಂದರು.
ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಬದಲಿಸಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಂಜು ಕೌರಿ, ಮುಖಂಡರಾದ ಸಿ.ಎಸ್. ಪ್ರಕಾಶ್, ಅಡಗೂರು ಬಸವರಾಜ್, ಮೀನಾಕ್ಷಿ, ಲಕ್ಷ್ಮಿ ನಾಗರಾಜು, ಪ್ರಕಾಶ್, ರಾಘವೇಂದ್ರ, ಮೋಹನ್ ಕುಮಾರ್, ರಮೇಶ್, ಚಂದನ್ ಅನುಗಟ್ಟ, ದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
