ಬೇಲೂರು, ಏಪ್ರಿಲ್ 18, 2026 : ಏಪ್ರಿಲ್ 14ರಂದು ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ತಾಲೂಕು ಆಡಳಿತ ಹಾಗೂ ತಹಶೀಲ್ದಾರ್ ಕಚೇರಿ ನಿರ್ಲಕ್ಷ್ಯದಿಂದ ಆಚರಿಸಲಾಗಿದೆ ಎಂದು ಆರೋಪಿಸಿ ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಭಾವಿ ಸಭೆಯಲ್ಲಿ ಸಾವಿರಾರು ಜನರೊಂದಿಗೆ ಹೈಸ್ಕೂಲ್ ಮೈದಾನದಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಅಧಿಕಾರಿಗಳು ಆ ನಿರ್ಧಾರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಸಮಾಜದ ಅಭಿಪ್ರಾಯವನ್ನು ಕಡೆಗಣಿಸಿದ್ದಾರೆ. ಇದರಿಂದ ಅಂಬೇಡ್ಕರ್ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ತಕ್ಷಣವೇ ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು ಎಂಬುದು ಏಕೈಕ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ಶಾಸಕರು ಸಹ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ಚಲೋ ಎಚ್ಚರಿಕೆ
ತಾಲೂಕು ಚಲವಾದಿ ಘಟಕದ ನಿಯೋಗವು ನಾಳೆ ಬೆಂಗಳೂರಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ನ್ಯಾಯ ದೊರೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಶಾಮಿಯಾನ ಹಾಕಿ ಉಗ್ರ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.
ರಾಜಕೀಯ ಹಸ್ತಕ್ಷೇಪ ಆರೋಪ
ತಾಲೂಕು ಚಲವಾದಿ ಸಮುದಾಯದ ಅಧ್ಯಕ್ಷ ಮಂಜುನಾಥ್ ಬಿ.ಎಸ್. ಮಾತನಾಡಿ, ಆಹ್ವಾನವಿಲ್ಲದೆ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಪ್ರತಿಭಟನಾ ಸ್ಥಳಕ್ಕೆ ಬಂದು ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಅವರು ರಾಜಕೀಯ ಉದ್ದೇಶದಿಂದ ಯುವಕರನ್ನು ಬಳಸಿಕೊಂಡು ಹೋರಾಟವನ್ನು ದಿಕ್ಕುತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸ್ಥಳೀಯ ಶಾಸಕರ ವಿರುದ್ಧ ರಾಜಕೀಯ ವೈಷಮ್ಯದಿಂದ ಈ ಹಸ್ತಕ್ಷೇಪ ನಡೆದಿದೆ ಎಂದು ಹೇಳಿದರು.
“ಅಂಬೇಡ್ಕರ್ ಎಲ್ಲರಿಗೂ ಸೇರಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ಶಾಸಕರಿಗೆ ಧಿಕ್ಕಾರ ಕೂಗುವುದು ಸರಿಯಲ್ಲ,” ಎಂದು ಅವರು ಹೇಳಿದರು.
ಇಂತಹ ಸಂದರ್ಭಸಾಧಕ ರಾಜಕಾರಣವನ್ನು ಯುವಕರು ಅನುಸರಿಸಬಾರದು, ಸ್ವಾಭಿಮಾನದಿಂದ ಹಾಗೂ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್ವರಪ್ಪ, ಡಿ.ಎಸ್.ಎಸ್ ತಾಲೂಕು ಸಂಚಾಲಕ ಸಿದ್ದರಾಜು, ಚಲವಾದಿ ಉಪಾಧ್ಯಕ್ಷ ಶಿವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
