ಹೊಳೆನರಸೀಪುರ, ಏಪ್ರಿಲ್ 18, 2026:ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ (Census) ಪೂರ್ವಸಿದ್ಧತಾ ಕಾರ್ಯಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಏಪ್ರಿಲ್ 20ರಿಂದ ಎಣಿಕೆದಾರರು ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಪುರಸಭಾ ಮುಖ್ಯ ಅಧಿಕಾರಿ ಯು.ಎನ್. ಶಿವಶಂಕರ್ ತಿಳಿಸಿದ್ದಾರೆ.
ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಜನಗಣತಿ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಈ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಪುರಸಭೆಯ ಒಟ್ಟು 23 ವಾರ್ಡ್ಗಳನ್ನು ಗಣತಿ ಕಾರ್ಯದ ಸುಲಭ ನಿರ್ವಹಣೆಗೆ 66 ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ. ಕಾರ್ಯದ ಯಶಸ್ವಿಗಾಗಿ 66 ಮುಖ್ಯ ಎಣಿಕೆದಾರರು ಹಾಗೂ ಶೇ.10 ರಷ್ಟು ಮೀಸಲು ಸಿಬ್ಬಂದಿ ಸೇರಿ ಒಟ್ಟು 72 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 11 ಮೇಲ್ವಿಚಾರಕರು ಹಾಗೂ ಇಬ್ಬರು ವಿಶೇಷ ಮೇಲ್ವಿಚಾರಕರು ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
ಪ್ರಸ್ತುತ ಬ್ಲಾಕ್ಗಳ ಗಡಿ ಗುರುತಿಸುವಿಕೆ ಹಾಗೂ ನಕ್ಷೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಏಪ್ರಿಲ್ 19ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ತದನಂತರ ಏಪ್ರಿಲ್ 20ರಿಂದ ಮೇ 15ರವರೆಗೆ ಎಣಿಕೆದಾರರು ಮನೆಮನೆಗೆ ಭೇಟಿ ನೀಡಿ ನಿಗದಿತ ನಮೂನೆಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, “ಜನಗಣತಿ ದೇಶದ ಅಭಿವೃದ್ಧಿ ಹಾಗೂ ಯೋಜನೆಗಳ ರೂಪಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಾರ್ವಜನಿಕರು ಎಣಿಕೆದಾರರಿಗೆ ಯಾವುದೇ ಆತಂಕವಿಲ್ಲದೆ ನಿಖರ ಮಾಹಿತಿಯನ್ನು ನೀಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಜಗದೀಶ್, ಸಿ.ಆರ್.ಪಿ ಚಂದ್ರು, ಎಣಿಕೆದಾರರಾದ ಎಚ್.ಆರ್. ಸೌಮ್ಯ, ಪಂಕಜ, ವಿವಿಧ ಶಾಲಾ ಶಿಕ್ಷಕರು ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
