ಬೆಂಗಳೂರು: ಸಾಯಿ ಸಿಲ್ಕ್ಸ್ (ಕಲಾಮಂದಿರ್) ಲಿಮಿಟೆಡ್ (ಎಸ್.ಎಸ್ಕೆ.ಎಲ್) ಸಂಸ್ಥೆಯು ಕಳೆದ ಹಲವಾರು ವರ್ಷಗಳಲ್ಲಿ ಕಂಪನಿಯ ಬೆಳವಣಿಗೆ ಮತ್ತು ರೂಪಾಂತರಕ್ಕೆ ಶ್ರೀ ಭಾರದ್ವಾಜ್ ರಚಮಡುಗು ಅವರು ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ, ಅವರನ್ನು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ.
ಶ್ರೀ ಭಾರದ್ವಾಜ್ ಅವರು ಸಂಸ್ಥೆಯ ಇ-ಕಾಮರ್ಸ್ ವಿಭಾಗದ ಅಭಿವೃದ್ಧಿ, ಕಾರ್ಯಾಚರಣೆಯ ಬಲವರ್ಧನೆ, ವ್ಯವಹಾರ ವಿಸ್ತರಣೆಯ ಯೋಜನೆ ಮತ್ತು ವಿವಿಧ ವಿಭಾಗಗಳ ನಡುವಿನ ಸಮನ್ವಯದ ಅನುಷ್ಠಾನ ಸೇರಿದಂತೆ ಇಡೀ ಸಂಸ್ಥೆಯಾದ್ಯಂತ ಪ್ರಮುಖ ಕಾರ್ಯತಾಂತ್ರಿಕ ಉಪಕ್ರಮಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದಾರೆ.
ಅವರು ಕಂಪನಿಯ ಐ.ಪಿ.ಒ. ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಹೊಸ ಮಾರುಕಟ್ಟೆ ಹಾಗೂ ಪ್ರದೇಶಗಳಿಗೆ ಸಾಯಿ ಸಿಲ್ಕ್ಸ್(ಎಸ್.ಎಸ್.ಕೆ.ಎಲ್) ಸಂಸ್ಥೆಯ ಬೆಳವಣಿಗೆಯನ್ನು ವೇಗಗೊಳಿಸಲು ಆಂತರಿಕ ಮತ್ತು ಬಾಹ್ಯ ತಂಡಗಳೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ಈ ನೇಮಕಾತಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಎಸ್.ಎಸ್ಕೆ.ಎಲ್ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಸಾದ್ ಚಲವಾದಿ ಅವರು “ಕೆಲವು ಪ್ರಯಾಣಗಳು ನಮಗೆ ಹೆಮ್ಮೆ ತರುತ್ತವೆ, ಅದು ನಾವು ಗಳಿಸಿದ ಹುದ್ದೆಯ ಕಾರಣಕ್ಕಲ್ಲ, ಬದಲಿಗೆ ಆ ಹುದ್ದೆಯನ್ನು ನಾವು ಗಳಿಸಿದ ಜವಾಬ್ದಾರಿಯುತ ಹಾದಿಯ ಕಾರಣಕ್ಕಾಗಿ. ಕಳೆದ ಹಲವು ವರ್ಷಗಳಲ್ಲಿ, ಭಾರದ್ವಾಜ್ ಅವರು ಸಂಸ್ಥೆಯ ಬಗ್ಗೆ ಆಳವಾದ ಬದ್ಧತೆ, ಪ್ರಮುಖ ಹಂತಗಳಲ್ಲಿ ಶಾಂತಿಯುತ ನಾಯಕತ್ವ ಮತ್ತು ತಂಡಗಳನ್ನು ಒಟ್ಟುಗೂಡಿಸಿ ಸ್ಪಷ್ಟತೆ ಹಾಗೂ ವೇಗದೊಂದಿಗೆ ಕೆಲಸವನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅವರು ಸಿ.ಇ.ಓ. ಆಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದನ್ನು ನೋಡಲು ನನಗೆ ಅತ್ಯಂತ ಸಂತೋಷವಾಗುತ್ತಿದೆ” ಎಂದು ಹೇಳಿದರು.
ಈ ನೇಮಕಾತಿಯು ಸಂಸ್ಥೆಯ ಒಳಗಡೆಯೇ ನಾಯಕತ್ವವನ್ನು ಪೋಷಿಸುವ ಹಾಗೂ ವಿಶ್ವಾಸ, ವ್ಯವಸ್ಥೆಗಳು ಮತ್ತು ನಿರಂತರತೆಯ ಮೂಲಕ ದೀರ್ಘಕಾಲಿಕ ಸಾಂಸ್ಥಿಕ ಬಲವನ್ನು ನಿರ್ಮಿಸುವ ತನ್ನ ವಿಶಾಲವಾದ ತತ್ವವನ್ನು ಪ್ರತಿಫಲಿಸುತ್ತದೆ ಎನ್ನುವುದು ಕಂಪನಿಯ ನಂಬಿಕೆಯಾಗಿದೆ.
ಎಸ್.ಎಸ್ಕೆ.ಎಲ್ ಸಂಸ್ಥೆಯು ತನ್ನ ಉದ್ಯಮ ವಿಸ್ತರಣೆಯ ಪಯಣವನ್ನು ಮುಂದುವರಿಸುತ್ತಿರುವ ಬೆನ್ನಲ್ಲೇ, ಈ ಹೊಸ ನಾಯಕತ್ವದ ರಚನೆಯಡಿಯಲ್ಲಿ ತಂತ್ರಜ್ಞಾನದ ಅಳವಡಿಕೆ, ಕಾರ್ಯಾಚರಣೆಯ ಚುರುಕುತನ, ಗ್ರಾಹಕರ ಉತ್ತಮ ಅನುಭವ ಮತ್ತು ರಿಟೇಲ್ ವ್ಯಾಪಾರದ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
– ಚಂದ್ರಚೂಡ ಕೆ.ಬಿ.
