ಶ್ಲೋಕ – 13
ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ ।
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ ॥೧೩॥
ಗಾಮ್ ಆವಿಶ್ಯ ಚ ಭೂತಾನಿ ಧಾರಯಾಮಿ ಅಹಮ್ ಓಜಸಾ ।
ಪುಷ್ಣಾಮಿ ಚ ಓಷಧೀಃ ಸರ್ವಾಃ ಸೋಮಃ ಭೂತ್ವಾ ರಸ ಆತ್ಮಕಃ –ಭೂಮಿಯೊಳಹೊಕ್ಕು ಜೀವಿಗಳನ್ನು ನಾನೆ ನನ್ನಳವಿನಿಂದ ಹೊತ್ತಿದ್ದೇನೆ. ಅಮೃತ ರಸಮಯನಾದ ಚಂದ್ರನಾಗಿ [ಸೌಮ್ಯರೂಪನಾದ್ದರಿಂದ ‘ಸೋಮ’ ನಾಮಕನಾಗಿ ಚಂದ್ರನೊಳಗಿದ್ದು] ಎಲ್ಲ ಸಸ್ಯಗಳನ್ನು ಬೆಳೆಸುತ್ತೇನೆ.
ಇಲ್ಲಿ ಗಾಮ್ ಅಂದರೆ ‘ಪ್ರಥಿವಿ’. ಈ ಭೂಮಿ ಆಕಾಶದಲ್ಲಿ ನಿರಾಲಂಭವಾಗಿ ನಿಲ್ಲುವಂತೆ ಸಂಕರ್ಷಣ ಶಕ್ತಿ (ಶೇಷಶಕ್ತಿ-ಆಕರ್ಷಣಶಕ್ತಿ- Gravitational force) ರೂಪದಲ್ಲಿ ಭೂಮಿಯನ್ನು ಹೊತ್ತವನು ಭಗವಂತ. ಇದು ಭಗವಂತನ ವರಾಹ ಅವತಾರವನ್ನು ವಿವರಿಸುತ್ತದೆ. ಕೆಳಕ್ಕೆ ಕುಸಿದು ನಾಶವಾಗಲಿದ್ದ ಭೂಮಿಯನ್ನು ಭಗವಂತ ವರಾಹ ರೂಪದಲ್ಲಿ ಎತ್ತಿ ಹಿಡಿದ-ಎನ್ನುವುದು ಕಥೆ. ಇಲ್ಲಿ ಭೂಮಿ ಕೆಳಕ್ಕೆ ಕುಸಿಯುವುದು ಅಂದರೆ ಅದು ತನ್ನ ಕಕ್ಷೆಯಿಂದ ಕಳಚುವುದು. ಭೂಮಿ ಕಕ್ಷೆಯನ್ನು ಬಿಟ್ಟರೆ ಅದು ಕ್ಷಣಾರ್ಧದಲ್ಲಿ ನಾಶವಾಗುತ್ತದೆ. ತಾಮಸ ಲೋಕದ ದೈತ್ಯ ಹಿರಣ್ಯಾಕ್ಷ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿದವ. “ನನಗೆ ನಿಲ್ಲಲು ಒಂದು ಜಾಗ ಮತ್ತು ಒಂದು ಕೋಲನ್ನು ಕೊಟ್ಟರೆ ನಾನು ಭೂಮಿಯನ್ನು ಕಕ್ಷೆಯಿಂದ ಕಳಚಬಲ್ಲೆ” ಎಂದು ನ್ಯೂಟನ್ ಹೇಳಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಈ ರೀತಿ ತಾಮಸ ಲೋಕದ ಈ ದೈತ್ಯ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿದಾಗ, ಭಗವಂತ ಅದನ್ನು ಮರಳಿ ಕಕ್ಷೆಯಲ್ಲಿಟ್ಟು ರಕ್ಷಿಸಿದ. ವೇದಕಾಲದ ಋಷಿಗಳಿಗೆ ‘ಭೂಮಿಯನ್ನು ಧಾರಣೆ ಮಾಡಿದ ಭಗವಂತ ವರಾಹ ರೂಪನಾಗಿ ಕಂಡ’. ಈ ಕಾರಣದಿಂದ ಭೂಮಿಯನ್ನು ಧಾರಣೆ ಮಾಡಿರುವ ಭಗವಂತನ ರೂಪವನ್ನು ವರಾಹ ರೂಪದಲ್ಲಿ ಕಾಣುತ್ತೇವೆ. ವರ=ಶ್ರೇಷ್ಠ. ಗಾಯತ್ರಿಯಲ್ಲಿ ‘ವರೇಣ್ಯಂ’ ಎನ್ನುವಲ್ಲಿ ಭೂಮಿಯನ್ನು ಧಾರಣೆ ಮಾಡಿರುವ ಭಗವಂತನ ವರಾಹ ರೂಪದ ಚಿಂತನೆ ಇದೆ. ರಷ್ಯನ್ ವಿಜ್ಞಾನಿ ವಿಲಿಕೋವಸ್ಕಿ(Velikovsky) ತನ್ನ “Worlds in collision” ಎನ್ನುವ ಪುಸ್ತಕದಲ್ಲಿ ಹೇಳುತ್ತಾನೆ : “ವೈಜ್ಞಾನಿಕವಾಗಿ ಎರಡು ಬಾರಿ ಭೂಮಿ ತನ್ನ ಕಕ್ಷೆಯಿಂದ ತಪ್ಪಿದ್ದು ನಿಜ, ಆದರೆ ನಮಗೆ ಇದು ಏಕೆ ಎನ್ನುವುದು ತಿಳಿದಿಲ್ಲ” ಎಂದು. ಆತ ಅಲ್ಲಿ ಭಾಗವತವನ್ನು ಉಲ್ಲೇಖಿಸಿ ಹೇಳುತ್ತಾನೆ: “ಭಾರತದ ಋಷಿಗಳು ಈ ವಿಚಾರವನ್ನು ತಿಳಿದಿದ್ದರು, ಒಂದು ದುಷ್ಟ ಶಕ್ತಿ ಭೂಮಿಯನ್ನು ಕಕ್ಷೆಯಿಂದ ಕಳಚಿತು, ಹಾಗು ಇನ್ನೊಂದು ದೈವೀ ಶಕ್ತಿ ಅದನ್ನು ಮರಳಿ ಕಕ್ಷೆಯಲ್ಲಿಟ್ಟಿತು” ಎಂದು. ಇದನ್ನೇ ಈ ಶ್ಲೋಕದಲ್ಲಿ ಕೃಷ್ಣ “ಗ್ರಾಮ್ ಧಾರಯಾಮಿ” ಎಂದಿದ್ದಾನೆ.
ಭೂಮಿಯನ್ನು ಧಾರಣೆ ಮಾಡಿರುವ ಭಗವಂತ ಭೂಮಿಯೊಳಗಿದ್ದು, ಪ್ರತಿಯೊಂದು ಜೀವಜಾತದೊಳಗಿದ್ದು ನಮ್ಮನ್ನು ರಕ್ಷಿಸುತ್ತಿದ್ದಾನೆ. ಉಪನಿಷತ್ತಿನಲ್ಲಿ ಹೇಳುವಂತೆ: “ಯ ಪ್ರಥಿವಿ ಅಂತರೋ ಯಮಯತಿ ಏಷತ ಆತ್ಮಾ ಅಂತರ್ಯಾಮಿ ಅಮೃತಃ”. ಅಂದರೆ “ಪ್ರಥಿವಿಯ ಒಳಗಿದ್ದು ಭಗವಂತ ನಮ್ಮನ್ನು ರಕ್ಷಿಸುತ್ತಿದ್ದರೂ ಕೂಡ, ಅದು ನಮಗೆ ತಿಳಿದಿಲ್ಲ”. ಈ ರೀತಿ ಭೂಮಿಯನ್ನು ಧಾರಣೆ ಮಾಡಿ ರಕ್ಷಿಸುವ ಭಗವಂತನ ಶಕ್ತಿಯನ್ನು ಇಲ್ಲಿ ‘ಓಜಸ್ಸು’ ಎಂದಿದ್ದಾರೆ. ಅಂದರೆ ಎಲ್ಲ ಅಡೆ-ತಡೆಗಳನ್ನು ನಿಗ್ರಹ ಮಾಡುವ ಶಕ್ತಿ.
ನಮ್ಮಲ್ಲಿ ಸಂಧ್ಯಾವಂದನೆ ಮಾಡುವಾಗ ಮನಸ್ಸಿನ ಸ್ನಾನದ ಒಂದು ಕ್ರಮವಿದೆ. ನಮ್ಮ ಸಹಸ್ರಾರದಲ್ಲಿನ ಚಂದ್ರ ಮಂಡಲದಲ್ಲಿ ಕುಳಿತಿರುವ ಧನ್ವಂತರಿಯ ಕೈಯಲ್ಲಿರುವ ಅಮೃತಕಲಶದಿಂದ ಅಮೃತಧಾರೆ ಕೆಳಕ್ಕೆ ಹರಿದು ಬರುತ್ತಿರುವುದನ್ನು ನಾವು ಮಾನಸಿಕವಾಗಿ ಅನುಭವಿಸಿ ಸ್ನಾನ ಮಾಡುವುದು. ಇಲ್ಲಿ ಇಪ್ಪತ್ನಾಲ್ಕು ಬಾರಿ ‘ಓಂ-ವಂ’ ಎಂದು ಹೇಳುವುದರಿಂದ ಆ ಚಂದ್ರಮಂಡಲದ ಅಮೃತ ದ್ರವ ಹರಿದು ನಾವು ಒಳಗಿನಿಂದ ಶುದ್ಧರಾಗುತ್ತೇವೆ. ಇದನ್ನು ಭಗವಂತನಲ್ಲಿ ಮನಸ್ಸನ್ನು ಏಕಾಂತಗೊಳಿಸಿ, ಮಾನಸಿಕವಾಗಿ ಅನುಭವಿಸಿಕೊಂಡು ಮಾಡಿದಾಗ ಮನಸ್ಸು ಶುದ್ಧಯಾಗುತ್ತದೆ. ನಮ್ಮಲ್ಲಿರುವ ಎಲ್ಲಕ್ಕಿಂತ ದೊಡ್ಡ ಕೊಳೆ ನಮ್ಮ ಮನಸ್ಸಿನಲ್ಲಿರುವ ಪಾಪಪುರುಷ. ಕೆಟ್ಟ ಭಾವನೆ, ಕೆಟ್ಟ ಯೋಚನೆ, ಅಸೂಯೆ, ಹೀಗೆ ಎಲ್ಲವೂ ತುಂಬಿರುವುದು ನಮ್ಮ ಮನಸ್ಸಿನಲ್ಲಿ. ಅದು ಹೋಗಬೇಕಾದರೆ ಈ ಚಂದ್ರ ಮಂಡಲದ ಅಮೃತ ಕಲಶದಿಂದ ಬರುವ ಅಮೃತ ದ್ರವದಿಂದ ಸ್ನಾನಮಾಡಬೇಕು. ಇದನ್ನೇ ಕೃಷ್ಣ ಇಲ್ಲಿ “ಸೋಮೋ ಭೂತ್ವಾ ರಸಾತ್ಮಕಃ” ಎಂದ. ಭಗವಂತ ಸೋಮ ರೂಪದಲ್ಲಿ ಚಂದ್ರನಲ್ಲಿ ತುಂಬಿದ್ದಾನೆ. ಆತ ನೀರಿನ ನಿಯಾಮಕ ಚಂದ್ರನಲ್ಲಿ ಸೋಮನಾಗಿ, ವನಸ್ಪತಿಗಳಲ್ಲಿ ಜೀವರಸ ತುಂಬಿದ. ನಾವು ಯಾವುದನ್ನು ತಿಂದು ಬದುಕುತ್ತೇವೆ ಆ ಗಿಡವನ್ನು ರಕ್ಷಿಸಿ ಬೆಳೆಸುವವ-ಚಂದ್ರನಲ್ಲಿ ತುಂಬಿರುವ ಸೋಮ ರೂಪಿ ಭಗವಂತ.
