ಶ್ಲೋಕ – 14
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ।
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥೧೪॥
ಅಹಮ್ ವೈಶ್ವಾನರಃ ಭೂತ್ವಾ ಪ್ರಾಣಿನಾಮ್ ದೇಹಮ್ ಆಶ್ರಿತಃ ।
ಪ್ರಾಣ ಅಪಾನ ಸಮಾಯುಕ್ತಃ ಪಚಾಮಿ ಅನ್ನಮ್ ಚತುರ್ವಿಧಮ್ –ನಾನು ‘ವೈಶ್ವಾನರ’ನಾಗಿ ಜೀವಿಗಳ ದೇಹದೊಳಗಿದ್ದು ಪ್ರಾಣ-ಅಪಾನರಿಂದೊಡಗೋಡಿ [ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ] ನಾಲ್ಕು ಬಗೆಯ ಆಹಾರವನ್ನು ಕರಗಿಸುತ್ತೇನೆ.
ಇಲ್ಲಿ ‘ಪಚಾಮ್ಯನ್ನಂ ಚರ್ತುವಿಧಮ್’ ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ” ಎಂದರ್ಥ. ಅನ್ನವೆಂದರೆ ಎಲ್ಲ ರೀತಿಯ ‘ಆಹಾರ’. “ಪ್ರಾಣಿನಾಂ ದೇಹಮಾಶ್ರಿತಃ” ಎಂದರೆ ‘ಪ್ರಾಣಿ’ಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ. ಭಕ್ಷ್ಯ ಅಂದರೆ ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು); ಭೋಜ್ಯ ಅಂದರೆ ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು). ಲೇಹ್ಯ ಅಂದರೆ ನೆಕ್ಕಿ ತಿನ್ನಲು ಯೋಗ್ಯವಾದುದು; ಚೋಷ್ಯ ಅಂದರೆ ಕುಡಿಯಲು ಯೋಗ್ಯವಾದುದು. ಈ ನಾಲ್ಕು ವಿಧದ ’ಅನ್ನ’ವನ್ನು ಸೇವಿಸುವ ಎಲ್ಲ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆ(ಸೂಕ್ಷ್ಮ-ಮಧ್ಯ-ಸ್ಥೂಲ)ಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವ ವೈಶ್ವಾನರ ರೂಪಿ ಭಗವಂತ.
ನಾವು ಸೇವಿಸುವ ಆಹಾರ ಮಣ್ಣು-ನೀರು-ಬೆಂಕಿಯ ಮಿಶ್ರಣ. ಆಹಾರದಲ್ಲಿನ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗು ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ, ಹಾಗು ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ. ಈ ರೀತಿ ಚಿನ್ನದ ಗಣಿಯಿಂದ ಚಿನ್ನವನ್ನು ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ಥಿತ ರೀತಿಯಲ್ಲಿ ಮಾಡಿ, ನಮಗೆ ಜೀವನವನ್ನು ಕೊಡುವವನು ಆ ಭಗವಂತ. ಭಗವಂತನ ಈ ಕಾರ್ಯಕ್ಕೆ ಸೇವಕ ಪ್ರಾಣ-ಅಪಾನ ಎನ್ನುವ ಪ್ರಾಣದೇವರ ಎರಡು ರೂಪಗಳು. ಕಠೋಪನಿಷತ್ತಿನಲ್ಲಿ ಹೇಳುವಂತೆ:
ಊರ್ಧ್ವಂ ಪ್ರಾಣಮುನ್ನಯತಿ ಅಪಾನಂ ಪ್ರತ್ಯಗಸ್ಯತಿ .ಮಧ್ಯೇ ವಾಮನಮಾಸೀನಂ ವಿಶ್ವೇ ದೇವಾ ಉಪಾಸತೇ ||೨-೨-೩||
ಇಲ್ಲಿ ಪ್ರಾಣ-ಅಪಾನ ಎನ್ನುವ ಪ್ರಾಣದೇವರ ಎರಡು ರೂಪ, ಮಧ್ಯದಲ್ಲಿ(ಹೃದಯದಲ್ಲಿ) ಭಗವಂತನ ವಾಮನ ರೂಪ. ಇದು ಪಂಚರೂಪಿ ಭಗವಂತನ ಉಪಾಸನೆಗಿಂತ ಭಿನ್ನವಾದ ಉಪಾಸನೆ. ಹೃದಯದ ಮಧ್ಯದಲ್ಲಿದ್ದು, ನಾವು ಉಂಡ ಆಹಾರವನ್ನು ಜೀರ್ಣಿಸಿ ಬದುಕು ಕೊಡುವವನು-ವಾಮನ ರೂಪಿ ಭಗವಂತ. ಈ ಮನ್ವಂತರದಲ್ಲಿ ವಾಮನ ದೇವೇಂದ್ರನ ರಕ್ಷನಾಗಿರುವ ‘ಉಪೇಂದ್ರ’. ಆದ್ದರಿಂದ ನಮ್ಮ ಹೃದಯದಲ್ಲಿರುವ ವಾಮನ ರೂಪಿ ಭಗವಂತನ ಉಪಾಸನೆ ಈ ಮನ್ವಂತರದಲ್ಲಿ ಬಹಳ ಮುಖ್ಯವಾಗುತ್ತದೆ. ನಮ್ಮೊಳಗೆ ವಾಮನ ರೂಪಿಯಾಗಿರುವ ಈ ಭಗವಂತನೇ ತ್ರಿವಿಕ್ರಮನಾಗಿ ಭೂಮಿ-ವ್ಯೋಮದಲ್ಲಿ ತುಂಬಿರುವವನು.
