ಶ್ಲೋಕ – 19
ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿದ್ ಭಜತಿ ಮಾಂ ಸರ್ವಭಾವೇನ ಭಾರತ ॥೧೯॥
ಯಃ ಮಾಮ್ ಏವಮ್ ಅಸಮ್ಮೂಢಃ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿತ್ ಭಜತಿ ಮಾಮ್ ಸರ್ವಭಾವೇನ ಭಾರತ –ಭ್ರಾಂತಿಯಳಿದು, ಹೀಗೆ ನನ್ನನ್ನು ಪುರುಷೋತ್ತಮನೆಂದು ತಿಳಿದವನು ಎಲ್ಲವನ್ನು ತಿಳಿದವನು. ಓ ಭಾರತ, ಎಲ್ಲ ಬಗೆಯಿಂದಲೂ ಅವನು ನನ್ನನ್ನೆ ಆರಾಧಿಸುತ್ತಾನೆ.
ಇಲ್ಲಿ ಹೇಳಿರುವ ವಿಚಾರಗಳನ್ನು ತಿಳಿದು ನಮಗೇನು ಲಾಭ ಎಂದು ಪ್ರಶ್ನೆ ಮಾಡುವವರಿಗೆ ಕೃಷ್ಣನ ಉತ್ತರ ಈ ಶ್ಲೋಕದಲ್ಲಿದೆ. ಕೃಷ್ಣ ಹೇಳುತ್ತಾನೆ: “ನನ್ನನ್ನು ಪುರುಷೋತ್ತಮ ಎಂದು ಅಹಂಕಾರವಿಲ್ಲದೆ, ಸ್ವಚ್ಛವಾದ ಮನಸ್ಸಿನಿಂದ, ಕೊಪವನ್ನು ಗೆದ್ದು, ಮೋಹವಳಿದು ತಿಳಿದವನು- ಎಲ್ಲವನ್ನು ತಿಳಿದವನು” ಎಂದು. ನಮಗೆ ಭಗವಂತನ ಅಸ್ತಿತ್ವ ಅರ್ಥವಾಗಬೇಕಾದರೆ ಮೊದಲು ಜಡಕ್ಕಿಂತ ಭಿನ್ನವಾದ ‘ನಾನು’ ಎನ್ನುವ ಚೇತನ ಈ ದೇಹದಲ್ಲಿದೆ ಎಂದು ಅರ್ಥವಾಗಬೇಕು(awareness of self). ಹೀಗೆ ಆತ್ಮಸಾಕ್ಷಾತ್ಕಾರವಾದ ಮೇಲೆ, ಭಗವಂತನ ಬಿಂಬ ಸಾಕ್ಷಾತ್ಕಾರವಾಗುತ್ತದೆ. ಯಾರು ಭಗವಂತನನ್ನು ತಿಳಿಯುತ್ತಾನೆ ಅವನು ಎಲ್ಲವನ್ನು ತಿಳಿಯಬಲ್ಲ. ಹೀಗಾಗಿ ನಾವು ಪ್ರಾಣಿಗಳಿಗಿಂತ ಬಿನ್ನವಾಗಿ ಜ್ಞಾನಿಗಳಾಗಿ ಬದುಕಬೇಕು. ಹೀಗೆ ಬದುಕಿದಾಗ ನಮಗೆ ದೇವರ ಮೇಲಿನ ಅಚಲ ಭಕ್ತಿ ಗಟ್ಟಿಗೊಳ್ಳುತ್ತದೆ. ಜ್ಞಾನಿ ಎನಿಸಿದವ ತನ್ನ ಸರ್ವಸ್ವವನ್ನು ಕಳೆದುಕೊಂಡರೂ ಕೂಡ, ‘ಅದು ಭಗವಂತನ ಕರುಣೆ’ ಎಂದು ಸ್ವೀಕರಿಸುತ್ತಾನೆ. ಅಜ್ಞಾನಿಯಲ್ಲಿ ಈ ದೃಢ ಭಕ್ತಿ ಇರದು. ಈ ರೀತಿ ದೃಢಭಕ್ತಿ ಮೂಡಬೇಕಾದರೆ ನಾವು ‘ಭಾರತ’ರಾಗಬೇಕು. ನಿರಂತರ ಜ್ಞಾನ ತೃಷೆ, ಜ್ಞಾನಿಗಳಲ್ಲಿ ಭಕ್ತಿ, ಭಗವದ್ ಭಕ್ತರಲ್ಲೇ ಹಿರಿಯರಾದ ಪ್ರಾಣದೇವರಲ್ಲಿ ಭಕ್ತಿ- ನಮ್ಮನ್ನು ಭಾರತರನ್ನಾಗಿ ಮಾಡಬಲ್ಲದು.
