ಶ್ಲೋಕ – 18
ಯಸ್ಮಾತ್ ಕ್ಷರಮತೀತೋSಹಮಕ್ಷರಾದಪಿ ಚೋತ್ತಮಃ ।
ಅತೋSಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥೧೮॥
ಯಸ್ಮಾತ್ ಕ್ಷರಮ್ ಅತೀತಃ ಅಹಮ್ ಅಕ್ಷರಾತ್ ಅಪಿ ಚ ಉತ್ತಮಃ ।
ಅತಃ ಅಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷ ಉತ್ತಮಃ –ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕಿಂತಲೂ ಹಿರಿಯನು. ಅದಕೆಂದೆ ಲೋಕದಲ್ಲು ವೇದದಲ್ಲು ‘ಪುರುಷೋತ್ತಮ’ ಎಂದೆ ಹೆಸರಾಗಿದ್ದೇನೆ.
ಹಿಂದಿನ ಶ್ಲೋಕದಲ್ಲಿ “ಯಾರು ಕ್ಷರಾಕ್ಷರಗಳಿಂದ ಅತೀತನೋ ಅವನು ಪುರುಷೋತ್ತಮ” ಎಂದು ಹೇಳಿದ ಕೃಷ್ಣ, ಇಲ್ಲಿ ನೇರವಾಗಿ “ಆ ಬೇರೆಯಾದ ಪುರುಷೋತ್ತಮ ನಾನೆ” ಎಂದು ಸ್ಪಷ್ಟವಾಗಿ ಹೇಳುತ್ತಾನೆ. ಮಧ್ವಾಚಾರ್ಯರು ವಿಷ್ಣುತತ್ವ ನಿರ್ಣಯದ ಮಂಗಳಾಚರಣೆಯಲ್ಲಿ ಹೇಳುತ್ತಾರೆ: “ಸದಾಗಮೈಕ ವಿಜ್ಞೇಯಂ ಸಮತೀತ ಕ್ಷರಾಕ್ಷರಂ ನಾರಾಯಣಂ ಸದಾ ವಂದೇ ನಿರ್ದೋಷ ಅಶೇಷ ಸದ್ಗುಣಂ” ಎಂದು. ಇಲ್ಲಿ ಕ್ಷರ ಮತ್ತು ಅಕ್ಷರದಿಂದ ಅತೀತನಾದ ಭಗವಂತನನ್ನು ಅವರು “ಸಮತೀತ ಕ್ಷರಾಕ್ಷರಂ” ಎಂದು ಕರೆದಿದ್ದಾರೆ.
ಈ ಶ್ಲೋಕದಲ್ಲಿ ಕ್ಷರದಿಂದ ಅತೀತ ಮತ್ತು ಅಕ್ಷರದಿಂದ ಉತ್ತಮ ಎಂದಿದೆ. ಇಲ್ಲಿ ಅತೀತ ಎಂದರೆ ಉತ್ತಮ. ಆದರೂ ಅತೀತ ಮತ್ತು ಉತ್ತಮ ಎಂದು ಎರಡು ಪದ ಬಳಕೆ ಮಾಡಿದ್ದಾರೆ. ಇದು ಒಂದು ವಿಶೇಷ ಅರ್ಥವನ್ನು ಕೊಡುತ್ತದೆ. ಕ್ಷರಪುರುಷನ ಅಸ್ತಿತ್ವದ ವ್ಯಾಪ್ತಿ ಈ ಬ್ರಹ್ಮಾಂಡದ ಒಳಗೆ. ಆದರೆ ಲಕ್ಷ್ಮೀ ನಾರಾಯಣರು ಈ ಬ್ರಹ್ಮಾಂಡವನ್ನು ಮೀರಿ ನಿಂತವರು. ಇದನ್ನು ‘ಅತೀತ’ ಪದ ವಿವರಿಸುತ್ತದೆ. ಭಗವಂತ ಅಕ್ಷರಳಾದ ಲಕ್ಷ್ಮಿಗಿಂತಲೂ ಉತ್ತಮ. ಈ ಶ್ಲೋಕದಲ್ಲಿ ‘ಅಪಿ’ ಮತ್ತು ‘ಚ-ಕಾರವನ್ನು’ ಒಟ್ಟಿಗೆ ಬಳಸಲಾಗಿದೆ. ಇದು ಭಗವಂತನ ಸರ್ವಶ್ರೇಷ್ಠತ್ವವನ್ನು ಹೇಳುತ್ತದೆ. ಆತನಿಗಿಂತ ಶ್ರೇಷ್ಠವಾದ ತತ್ವ ಇನ್ನೊಂದಿಲ್ಲ.
ಪುರುಷೋತ್ತಮ ಪದದ ಎಲ್ಲ ಮುಖದ ಅರ್ಥ ಕೇವಲ ಭಗವಂತನಲ್ಲಿ ಮಾತ್ರ ಅನ್ವಯವಾಗುತ್ತದೆ. ಕೃಷ್ಣ ಹೇಳುತ್ತಾನೆ: “ಲೋಕದಲ್ಲಿ ಮತ್ತು ವೇದದಲ್ಲಿ ಪುರುಷೋತ್ತಮ ಎಂದು ಕರೆದಿರುವುದು ನನ್ನನ್ನು” ಎಂದು. ಇಲ್ಲಿ ಲೋಕ ಎಂದರೆ ಪೌರುಷೇಯವಾದ ಪುರಾಣ ಗ್ರಂಥಗಳು. ಉದಾಹರಣೆಗೆ: ರಾಮಾಯಣ, ಮಹಾಭಾರತ, ಪಂಚರಾತ್ರ, ಪುರಾಣ, ಇತ್ಯಾದಿ. ಹೀಗೆ “ಪುರುಷೋತ್ತಮ” ಎನ್ನುವುದು ಪರಮ ಮುಖ್ಯವಾಗಿ ಕೇವಲ ಭಗವಂತನಿಗೆ ಮಾತ್ರ ಅನ್ವಯ.
