ಕೆ.ಆರ್.ಪೇಟೆ: ರೈತ ಮಹಿಳೆಯರ ಮೇಲೆ 20ಮಂದಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಕ್ಕನಹಳ್ಳಿ ಗ್ರಾಮದ ರೈತ ಮಹಿಳೆಯರಾದ ಶಾರದಮ್ಮ, ಲೀಲಾವತಿ, ಭಾಗ್ಯ, ಪ್ರಿಯಾಂಕ ಎಂಬ ಮಹಿಳೆಯರ ಮನೆಗೆ ಮಾರಕಾಸ್ತçಗಳೊಂದಿಗೆ ಜಕ್ಕನಹಳ್ಳಿ ಗ್ರಾಮದ ಕುಮಾರೇಂದ್ರ, ಹೊನ್ನೇಗೌಡ, ಚಂದ್ರಶೇಖರ್, ಅನಂತಕುಮಾರ, ಪ್ರಕಾಶ, ಮೋಹನ್ಕುಮಾರ, ಸೇರಿದಂತೆ ಸುಮಾರು 20ಮಂದಿಯಿದ್ದ ಗುಂಪು ಏಕಾಏಕಿ ಮನೆಗೆ ನುಗ್ಗಿ ಹಲ್ಲೆ ನಡೆಸಿರುತ್ತಾರೆ.
ಮಾರಕಾಸ್ತçಗಳೊಂದಿಗೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಗಾಯಾಳು ಶಾರದಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಗುಂಪು ಹಲ್ಲೆಯಿಂದ ಜಕ್ಕನಹಳ್ಳಿ ಗ್ರಾಮದ ರೈತ ಮಹಿಳೆಯರಾದ ಶಾರದಮ್ಮ, ಲೀಲಾವತಿ, ಭಾಗ್ಯ, ಪ್ರಿಯಾಂಕ ಗಂಭೀರವಾಗಿ ಗಾಯಗೊಂಡು ಕೆ.ಆರ್.ಪೇಟೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿನ ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಗಾಯಾಳು ಮಹಿಳೆಯರ ಕುಟುಂಬದ ಪರವಾಗಿ, ಆರೋಪಿಗಳಾದ ಕುಮಾರೇಂದ್ರ ಇತರರ ವಿರುದ್ದವಾಗಿ ಜಮೀನಿನ ವ್ಯಾಜ್ಯವು ತೀರ್ಮಾನವಾಗಿತ್ತು.

ಇದೇ ಜಿದ್ದಿನ ಹಿನ್ನೆಲೆಯಲ್ಲಿ ಕುಮಾರೇಂದ್ರ ನೇತೃತ್ವದಲ್ಲಿ ಮನೆಗೆ ದಾಳಿ ನಡೆಸಿರುವ 20ಮಂದಿಯ ಗುಂಪು ಮಹಿಳೆಯರು, ವಯೋವೃದ್ದರ ಮೇಲೆ ಮಚ್ಚು, ದೊಣ್ಣೆ, ಕಟ್ಟಿಗೆಯಿಂದ ಮನ ಬಂದಂತೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳ ಪೈಕಿ ಕುಮಾರೇಂದ್ರ ಎಂಬ ವ್ಯಕ್ತಿ ಕೆ.ಆರ್.ಪೇಟೆಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಕಾನೂನು ರಕ್ಷಣೆ ಮಾಡಬೇಕಾದ ವಕೀಲರೇ ಮುಂದೆ ನಿಂತು ಕಾನೂನನ್ನು ಕೈಗೆತ್ತಿಕೊಂಡು ಮಹಿಳೆಯರು ಮತ್ತು ವಯೋವೃದ್ದರ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಆರೋಪಿಸಿರುವ ಗಾಯಾಳು ಮಹಿಳೆ ಶಾರದಮ್ಮ ಅವರು ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.
ಘಟನೆ ಕುರಿತು 20ಮಂದಿ ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಿಸಿರುವ ಕೆ.ಆರ್.ಪೇಟೆ ಟೌನ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
– ಶ್ರೀನಿವಾಸ್ ಆರ್.
