ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿಯ ಎಚ್ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಯಿಂದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಗ್ರಾಹಕರು, ರೈತ ಸಂಘದ ಮುಖಂಡರು ಹಾಗೂ ಸಾರ್ವಜನಿಕರು ಬುಧವಾರ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ ನಡೆಸಿದರು.
ಶಾಖೆಯಲ್ಲಿ ಸುಮಾರು ₹85 ಲಕ್ಷ ಹಣ ದುರುಪಯೋಗವಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ವಸಹಾಯ ಸಂಘಗಳಿಗೆ ನೀಡಲಾಗುವ ಸಾಲಕ್ಕೆ ರಾಜ್ಯ ಸರ್ಕಾರದಿಂದ ಬರುವ ಸಹಾಯಧನ ಹಾಗೂ ಬಡ್ಡಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡದೆ ಶಾಖೆಯ ಸಿಬ್ಬಂದಿಯೇ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ರೈತರು ಪಡೆದಿರುವ ಚಿನ್ನದ ಮೇಲಿನ ಸಾಲದಲ್ಲೂ ಅಕ್ರಮ ನಡೆದಿದೆ ಹಾಗೂ ಮೃತಪಟ್ಟವರ ಹೆಸರಿನಲ್ಲಿದ್ದ ಖಾತೆಗಳ ಹಣವನ್ನೂ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಾಸನ ಜಿಲ್ಲಾದ್ಯಂತ ಇರುವ ಎಚ್ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿಯೂ ಇದೇ ರೀತಿಯ ಹಣಕಾಸು ಅಕ್ರಮ ನಡೆದಿರುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಿ, ಅಕ್ರಮ ನಡೆದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷೆ ಚಿನ್ನೆನಹಳ್ಳಿ ನಾಗರತ್ನಮ್ಮ, ಹಾಸನ ಜಿಲ್ಲಾಧ್ಯಕ್ಷ ರಘು, ತಾಲೂಕು ಅಧ್ಯಕ್ಷ ರಾಮಚಂದ್ರ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಲ್. ಹರೀಶ್, ಎಚ್.ಸಿ. ಕುಮಾರ್, ಬಾಬು, ಕಾಂಗ್ರೆಸ್ ಯುವ ಮುಖಂಡರಾದ ಜೋಗಿಪುರ ನಂದನ್ ಜೆ.ಎನ್., ಅಶೋಕ್, ರಾಜಣ್ಣ, ನಾಗೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಬ್ಯಾಂಕ್ ಶಾಖೆಯ ಎದುರು ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದ ಮುಖಂಡರು, ಗ್ರಾಹಕರ ಹಣದ ಸುರಕ್ಷತೆ ಹಾಗೂ ಅಕ್ರಮದ ಸಂಪೂರ್ಣ ತನಿಖೆಗೆ ಆಗ್ರಹಿಸಿದರು.
– ಮಂಜುನಾಥ್ ಐ.ಕೆ.
