ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ರೈತರಿಗೆ ಬಯೋಚಾರ್ ತಯಾರಿಕೆ ಹಾಗೂ ಅದರ ಕೃಷಿ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿ.ಸಿ. ಸಂಧ್ಯಾ ಭಾಗವಹಿಸಿದ್ದರು. ಕೃಷಿ ವಿದ್ಯಾರ್ಥಿಗಳಾದ ದಿವ್ಯ, ಅಮೂಲ್ಯ ಹಾಗೂ ಬಾಬಾ ಮೋನಿತರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಗ್ರಾಮದಲ್ಲಿ ಲಭ್ಯವಿದ್ದ ಕಬ್ಬಿಣದ ಡ್ರಮ್ ಬಳಸಿಕೊಂಡು ಮೆಕ್ಕೆಜೋಳದ ಕಾಂಡ, ಒಣ ಕಡ್ಡಿಗಳು, ತೆಂಗಿನ ಚಿಪ್ಪು ಸೇರಿದಂತೆ ಕೃಷಿ ತ್ಯಾಜ್ಯವನ್ನು ಸುಟ್ಟು ವ್ಯರ್ಥ ಮಾಡುವ ಬದಲು, ಅವುಗಳನ್ನು ಬಯೋಚಾರ್ ಆಗಿ ಪರಿವರ್ತಿಸಿ ಮಣ್ಣಿಗೆ ಮರುಸೇರಿಸಬಹುದು ಎಂದು ರೈತರಿಗೆ ತಿಳಿಸಲಾಯಿತು.

ಕೃಷಿ ತ್ಯಾಜ್ಯವನ್ನು ಮೊದಲು ಸಂಗ್ರಹಿಸಿ ಒಣಗಿಸಿ, ನಂತರ ಡ್ರಮ್ ಅಥವಾ ಗುಂಡಿಯಲ್ಲಿ ಕಡಿಮೆ ಆಮ್ಲಜನಕದ ಪರಿಸ್ಥಿತಿಯಲ್ಲಿ ಬಿಸಿ ಮಾಡುವ ಮೂಲಕ ಬಯೋಚಾರ್ ತಯಾರಿಸುವ ವಿಧಾನವನ್ನು ಹಂತ ಹಂತವಾಗಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ತ್ಯಾಜ್ಯ ಸಂಪೂರ್ಣವಾಗಿ ಬೂದಿಯಾಗದಂತೆ ಬೆಂಕಿಯನ್ನು ನಿಯಂತ್ರಿಸುವುದು ಹಾಗೂ ಬಯೋಚಾರ್ ಸಿದ್ಧವಾದ ಬಳಿಕ ತಂಪಾಗಿಸುವ ವಿಧಾನವನ್ನೂ ತೋರಿಸಲಾಯಿತು.
ತಯಾರಾದ ಬಯೋಚಾರ್ ಅನ್ನು ನೇರವಾಗಿ ಮಣ್ಣಿಗೆ ಹಾಕುವ ಬದಲು ಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಳಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಸಂಧ್ಯಾ ತಿಳಿಸಿದರು. ಬಯೋಚಾರ್ನ ರಂಧ್ರಯುಕ್ತ ರಚನೆಯು ಮಣ್ಣಿನಲ್ಲಿ ನೀರು ಹಾಗೂ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಕೃಷಿ ತ್ಯಾಜ್ಯದ ಸದ್ಬಳಕೆಯ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ರೈತರು ತಮ್ಮ ಹೊಲದಲ್ಲೇ ಲಭ್ಯವಿರುವ ಕೃಷಿ ತ್ಯಾಜ್ಯ ಬಳಸಿ ಕಡಿಮೆ ವೆಚ್ಚದಲ್ಲಿ ಬಯೋಚಾರ್ ತಯಾರಿಸಬಹುದಾಗಿದೆ. ಇದು ಮಣ್ಣಿನ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುವ ಸರಳ ಹಾಗೂ ಸುಸ್ಥಿರ ವಿಧಾನವಾಗಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ 32 ಮಂದಿ ರೈತರು ಭಾಗವಹಿಸಿ ಬಯೋಚಾರ್ ತಯಾರಿಕೆ ಹಾಗೂ ಬಳಕೆಯ ಕುರಿತು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
– ಮಂಜುನಾಥ್ ಐ.ಕೆ.
