ರಾಮನಾಥಪುರ, ಜೂನ್ 24: ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಜೂನ್ 30ರಂದು ಶ್ರೀಮಠದ ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಗಣಾರಾಧನಾ ಮಹೋತ್ಸವ ನಡೆಯಲಿದೆ.
ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠ ಮತ್ತು ಕನ್ನಡ ಮಠದ ಸಭಾಂಗಣದಲ್ಲಿ ಪರಮಪೂಜ್ಯ ಶ್ರೀ ಚಿಕ್ಕವೀರ ದೇಶಿಕೇಂದ್ರ ಮಹಾಸ್ವಾಮೀಜಿಗಳ 97ನೇ ಗಣಾರಾಧನೆ, ಶ್ರೀ ಚನ್ನವೀರ ದೇಶಿಕೇಂದ್ರ ಮಹಾಸ್ವಾಮೀಜಿಗಳ 45ನೇ ವರ್ಷದ ಗಣಾರಾಧನಾ ಮಹೋತ್ಸವ, ಕನ್ನಡ ಮಠದ 217ನೇ ವರ್ಷದ ಸಂಸ್ಥಾಪನಾ ವರ್ಷಾಚರಣೆ ಹಾಗೂ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ನುಡಿ ನೈವೇದ್ಯ ಗೌರವಾರ್ಪಣೆ, ಸಮಾಜ ಯುವಚೇತನ ಶ್ರೀಗಳ ಸನ್ಮಾನ, ಎಸ್.ಸಿ.ವಿ.ಡಿ.ಎಸ್. ವಿದ್ಯಾಸಂಸ್ಥೆಗಳ 35ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನಡೆಯಲಿದೆ.
ಕನ್ನಡ ಮಠದ ಇತಿಹಾಸ ಕುರಿತು ಮಾಹಿತಿ ನೀಡಿದ ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿಗಳು, ಕನ್ನಡ ಮಠದ ಆಡಳಿತವನ್ನು ಬೆಟ್ಟದಪುರದ ಸಲೀಲಾಖ್ಯ ಮಠದ ಹಿಂದಿನ ನಾಲ್ವರು ಪೂಜ್ಯ ಸ್ವಾಮೀಜಿಗಳು ಸಮರ್ಥವಾಗಿ ನಿರ್ವಹಿಸಿದ್ದು, ಸಲೀಲಾಖ್ಯ ಮಠವನ್ನು 15ನೇ ಶತಮಾನದಲ್ಲಿ ಶ್ರೀ ಗೊಸಲ ಸಿದ್ಧಲಿಂಗೇಶ್ವರರು ಸ್ಥಾಪಿಸಿದ್ದರು ಎಂದು ತಿಳಿಸಿದರು. ಪ್ರಸ್ತುತವೂ ಅವರ ತೊರುಗದ್ದಿಗೆ ಬೆಟ್ಟದಪುರದಲ್ಲಿದ್ದು ಭಕ್ತರ ಆರಾಧನಾ ಕೇಂದ್ರವಾಗಿದೆ ಎಂದರು.
ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಸಂಗಮವಾಗಿರುವ ಈ ಮಹೋತ್ಸವದಲ್ಲಿ ಭಕ್ತರು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದ ವತಿಯಿಂದ ಮನವಿ ಮಾಡಲಾಗಿದೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
