ರಾಮನಾಥಪುರ, ಜೂನ್ 24: ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಉದ್ದೇಶದಿಂದ ಲಕ್ಕೂರು ಗ್ರಾಮದ ಸಮಾಜಸೇವಕ ಹಾಗೂ ಎಲೆಕ್ಟ್ರಾನಿಕ್ ಗುತ್ತಿಗೆದಾರರಾದ ಶ್ರೀ ಕಾಂತರಾಜು ಅವರು ಕಳೆದ 17 ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಮನಾಥಪುರ ಹೋಬಳಿಯ ಲಕ್ಕೂರು ಗ್ರಾಮದ ನಿವಾಸಿಯಾಗಿರುವ ಕಾಂತರಾಜು ಅವರು ತಮ್ಮ ಬಾಲ್ಯದಲ್ಲಿ ಬಡತನದ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಅನುಭವದಿಂದ ಪ್ರೇರಿತರಾಗಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಲಕ್ಕೂರು ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲಿನ ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 40ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಸುಮಾರು 2,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೋಟ್ ಪುಸ್ತಕಗಳು, ಕಲಿಕಾ ಸಾಮಗ್ರಿಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.
ಇದರ ಜೊತೆಗೆ ಶಾಲಾ ಆವರಣಗಳಲ್ಲಿ ಗಿಡ ನೆಡುವ ಕಾರ್ಯಕ್ರಮ, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಸಮಾಜ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವಂತಹ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ತಾವು ದುಡಿದ ಆದಾಯದ ಒಂದು ಭಾಗವನ್ನು ಮಕ್ಕಳ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗಾಗಿ ಮೀಸಲಿಡುತ್ತಿರುವ ಕಾಂತರಾಜು ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ. ಸರ್ಕಾರಿ ಶಾಲೆಗಳು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣದ ಬೆಳವಣಿಗೆಗಾಗಿ ಅವರು ಸಲ್ಲಿಸುತ್ತಿರುವ ಸೇವೆ ಇತರರಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆ.
ಸಮಾಜದಲ್ಲಿ ಇಂತಹ ಸೇವಾ ಮನೋಭಾವದ ವ್ಯಕ್ತಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದು, ಅವರ ಕಾರ್ಯಗಳು ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
