ಬದುಕು ಸಂತೆ ಬಂಡಿ ಕಥಾ ಸಂಕಲನ ಪ್ರಕಟಿಸಿದ್ದ ಆನಂದಮೂರ್ತಿ ಒಳ್ಳೆಯ ಕತೆಗಾರರೆಂದು ಫೇಮಸ್ ಆಗಿದ್ದರು. ಬರೇ ಕತೆ ಬರೆದುಕೊಂಡಿದ್ದರೆ ಹೊಟ್ಟೆ ತುಂಬುವುದುಂಟೇ..? ಮಗ ಆದಿಮೂರ್ತಿಗೆ ಆರು ವರ್ಷ ತುಂಬಲು ಹುಟ್ಟಿದೂರು ಬಿಟ್ಟು ಬಂದು ಹಾಸನ ಗೊರೂರು ರಸ್ತೆಯ ಬಿಟ್ಟಗೋಡನಹಳ್ಳಿಯಲ್ಲಿ ಮನೆ ಹುಡುಕಿದರು. ಇಲ್ಲಿಗೆ ರಿಂಗ್ ರೋಡ್ ಬಂದು ಮನೆ ಬಾಡಿಗೆ ಜಾಸ್ತಿ ಆಗಿತ್ತು. ಬ್ರೋಕರ್ ಥ್ರೂ ಪ್ರಯತ್ನ ಮಾಡಿ ಎಂಟು ಲಕ್ಷಕ್ಕೆ ಭೋಗ್ಯಕ್ಕೆ ಒಂದು ಸಿಂಗಲ್ ಬೆಡ್ ರೂಂ. ಮನೆ ಮಾಡಿದರು. ಮಗನನ್ನು ನಗರದ ಪ್ರತಿಷ್ಠಿತ ವಿನಯ ಕಾನ್ವೆಂಟಿಗೆ ಸೇರಿಸಲು ಇಚ್ಚಿಸಿ ಒಂದು ರೌಂಡ್ ಮಾತನಾಡಿಕೊಂಡು ಬಂದಿದ್ದರು. ನಿಮ್ಮ ಮಗನನ್ನು ಕರೆದುಕೊಂಡು ಬನ್ನಿ ಅವನಿಗೆ ಒಂದು ಎಂಟ್ರೆನ್ಸ್ ಟೆಸ್ಟ್ ಇರುತ್ತೆ. ಅದರಲ್ಲಿ ಪಾಸಾದರೆ ಅಡ್ಮಿಷನ್ ಮಾಡಿಕೊಳ್ಳುತ್ತೇವೆ.. ಸರಿ ಮಿಸ್, ಫೀಸ್ ಎಷ್ಟು ಎಂದು ವಿಚಾರಿಸಲು ವರ್ಷಕ್ಕೆ ಒಂದೂವರೆ ಲಕ್ಷ ಅಷ್ಟೇ. ಎನ್ನಲು ಅಷ್ಟಕ್ಕೆ ಬೆಚ್ಚಿ ಬಿದ್ದಿದ್ದಾರೆ ಕತೆಗಾರರು.
ಬಿಟ್ಟಗೋಡನಹಳ್ಳಿಯ ಪುಕ್ಸಟ್ಟೆ ಸರ್ಕಾರಿ ಶಾಲೆಗೆ ಸೇರಿಸೋಣ ತಾರಾ.. ಎಂದ ಕೂಡಲೇ ಮಡದಿ ಉರಿವ ಒಲೆಯ ಕೊಳ್ಳಿ ಹಿಡಿದು ಕೊಳ್ಳಿದೆವ್ವ ಮೈಮೇಲೆ ಬಂದAತೆ ರೇಗಾಡಲು ತೆಪ್ಪಗಾಗಿದ್ದರು.
ಅಂದು ಜೂನ್ ಒಂದು. ಮಗನನ್ನು ಕಾನ್ವೆಂಟಿಗೆ ಕರೆದುಕೊಂಡು ಹೋಗಲು ನಿಶ್ಚಯಿಸಿ ಬೆಳಿಗ್ಗೆ ಏಳಕ್ಕೆ ಎದ್ದು ಕಾಫಿ ಕುಡಿಯುತ್ತಾ ಮಂಚದ ಮೇಲೆ ಬೆರಳು ಚೀಪುತ್ತಾ ಮಲಗಿದ್ದ ಮಗನನ್ನು ನೋಡಿದರು. ನೆತ್ತಿಸೂರ್ಯ ಕಿಟಕಿ ಮೂಲಕ ನುಗ್ಗಿ ಬಂದು ಮಗ ಕೆಂಪಾಗಿ ಪ್ರಕಾಶಿಸುತ್ತಿದ್ದ. ಸೂರ್ಯನ ಹೀಟಿಗೆ ಶಾಕ್ ಹೊಡೆದಂತ್ತಾಗಿ ಕಣ್ಣು ಬಿಟ್ಟ ಆದಿ “ಅಪ್ಪ ಇಲ್ಲಿ ಬಾ.. ಕರೆದನು. “ಈ ತರಹ ಅಪ್ಪನನ್ನು ಕರೆಯಬಾರದು ಮಗು, ಮರ್ಯಾದೆಯಿಂದ ಕರೆಯಬೇಕು.. ಎನ್ನಲು “ಅಪ್ಪ, ಮರ್ಯಾದೆಯಿಂದ ಇಲ್ಲಿ ಬಾ.. ಮಗನ ಸಿಡುಕಿಗೆ ಅಪ್ಪನೇ ಹೆದರಿ ಮರು ಮಾತನಾಡದೆ ಫಿಲ್ಟರ್ ಕಾಫಿ ಸೀಫ್ ಮಾಡಿದರು. ಗೂಟಕ್ಕೆ ನೇತು ಹಾಕಿದ್ದ ಟರ್ಕಿ ಟವಲ್ ಎತ್ತಿಕೊಂಡು ಬಚ್ಚಲು ಮನಗೆ ಸ್ನಾನ ಮಾಡಲು ಹೋಗುವರು. ಸೂರ್ಯನ ಕಾಂತಿಗೆ ಬಿಸಿಯಾಗಿದ್ದ ಸೋಲರ್ ನೀರಿನ ಸ್ನಾನದಿಂದ ಖುಷಿಯಾದರು. ಮನೆಗೆ ಫ್ರಿ ಕರೆಂಟ್ ಇದೆ ನಿಜ. ಆದರೆ ಅದು ಐವತ್ತು ಯೂನಿಟ್ ಗಷ್ಟೇ ಲಿಮಿಟ್ ಆಗಿತ್ತು. ಅದು ಟಿವಿ, ಪ್ರಿಡ್ಜ್, ಮನೆ ದೀಪಗಳಿಗಷ್ಟೇ ಸಾಕಾಗಿತ್ತು. ಟರ್ಕಿ ಟವಲ್ ನಿಂದ ತಲೆ ಒರೆಸಿಕೊಂಡು ಅದೇ ಟವಲ್ನ್ನು ಸೊಂಟಕ್ಕೆ ಸುತ್ತಿಕೊಂಡು ದೇವರ ರೂಂ ಪ್ರವೇಶಿಸಿದರು.
ಅವತ್ತು ಸೋಮುವಾರ. ಶಿವ ಕತೆಗಾರರ ಮನೆದೇವರು. ಮೊನ್ನೆಗೆ ಅವರಿಗೆ ೬೦ ವರ್ಷ ತುಂಬಿ ಈ ಸವಿನೆನಪಿನಲ್ಲಿ ಕಾಶಿಗೆ ಹೋಗಿ ಬರುವಾಗ ಶಿವಲಿಂಗ ತಂದಿದ್ದರು. ಅದರ ಮೇಲೆ ಯಾರೋ ಒಂದು ಕಲ್ಲು ಇಟ್ಟಿದ್ದರು.
“ಹೇ ಆದಿ, ಯಾಕೋ ದೇವರ ಮೇಲೆ ಕಲ್ಲು ಇಟ್ಟಿದ್ದಿ..? “ಅಮ್ಮ ಹೇಳಿದ್ಲು, ದೇವರ ಮೇಲೆ ಬಾರ ಹಾಕಿ ಶಾಲೆಗೆ ಹೋಗು ಅಂತ.. ಆದಿಯ ಉತ್ತರಕ್ಕೆ ಕತೆಗಾರರು ತತ್ತರಿಸಿದರು. ಹೇ ತಾರಾ ಎಂತಹ ಮಗನಿಗೆ ಜನ್ಮ ಕೊಟ್ಟೆಯೇ ತಾಯಿ.. ಎಂದು ಗೊಣಗಿದರು. ದೇವರ ರೂಂನಲ್ಲಿ ಶಿವನ ಪೂಜೆಗೆ ಮಡದಿ ಮನೆಯ ಹಿತ್ತಿಲ ಪಾರ್ಕ್ ನಿಂದ ಕೂಯ್ದು ತಂದಿದ್ದ ಗುಲಾಬಿ ಹೂವನ್ನು ದೇವರಿಗೆ ಮುಡಿಸಿದರು. ಪೂಜೆ ಮುಗಿಸಿ ತಿಂಡಿ ತಿನ್ನಲು ಡೈನಿಂಗ್ ಟೇಬಲ್ ಬಳಿ ಬರುವರು. ಅಲ್ಲಿ ಆಗಲೇ ತಾತ ಮೊಮ್ಮಗ ದೋಸೆ ತಿನ್ನುತ್ತಿದ್ದರು. ಮನೆಯಲ್ಲಿದ್ದ ಹಳೆಯ ರೇಡಿಯೋದಲ್ಲಿ ಭಕ್ತಿಗೀತೆ ಕೇಳಿ ಬರುತ್ತಿತ್ತು. ಫಲಿಸಿತು ಒಲವಿನ ಪೂಜಾ ಫಲ.. ಹಾಡು ಕೇಳುತ್ತಿದ್ದ ಮೊಮ್ಮಗ “ತಾತ ರೇಡಿಯೋ ಸ್ಟೇಷನ್ ಗಳಲ್ಲಿ ಎತ್ತರದ ಟವರ್ ಯಾಕೆ ನಿರ್ಮಿಸಿರುತ್ತಾರೆ..? ಎಂದು ಕುತೂಹಲದ ಪ್ರಶ್ನೆ ಕೇಳಿದನು.
“ರೇಡಿಯೋ ಪ್ರೋಗ್ರಾಂ ಚೆನ್ನಾಗಿಲ್ಲ ಅಂತ ಯಾರಾದ್ರೂ ಕಲ್ಲು ಹೊಡೆದ್ರೂ ತಾಗದೇ ಇರಲಿ ಅಂತ.. ತಾತ ತಮಾಷೆಗೆ ಹೇಳಲು ಕತೆಗಾರರು ಸಿಟ್ಟಾಗುವರು. “ಏನಪ್ಪ ನೀನು, ಮೊಮ್ಮಗನಿಗೆ ಇದೇ ನೀತಿ ಪಾಠವ ಹೇಳೋದು.. ಎಂದು ರೇಗಿ ಮಡದಿಗೆ “ ಲೇ ತಾರಾ ದೋಸೆ ತಾರಾ.. ಪ್ರಾಸ ಉಲಿಯುವನು. ಆದಿಮೂರ್ತಿಯು ಡ್ಯಾಡ್, ರಾತ್ರಿ ಊಟವಾದ ಮೇಲೆ ನೀವು ಏನ್ಮಾಡ್ತಿರಾ..?
“ಲೋ ದಡ್ಡ, ಮಲಗ್ತಿನೋ..!
“ಆದ್ರೇ, ನಾನು ಹಾಗೆ ಮಾಡೊಲ್ಲಾ..
“ಮತ್ತೇ ಇನ್ನೇನು ಮಾಡ್ತಿಯಾ..?
“ಕೈ ತೊಳ್ಕೋತ್ತೀನಿ.. ಮಗನ ಉತ್ತರಕ್ಕೆ ಅಪ್ಪ ಬೆಚ್ಚಿ ಬೆರಗಾದನು. “ಅಪ್ಪ, ನನ್ನನ್ನು ಖಾಸಗಿ ಕಾನ್ವೆಂಟಿಗೆ ಸೇರಿಸಲು ಹೊರಟ್ಟಿದ್ದೀರಿ. ನನಗೆ ಇನ್ನೂ ಬೂಟ್ಸ್ ತೆಗೆದುಕೊಟ್ಟಿಲ್ಲ. ಇವತ್ತು ನೀವು ತೆಕ್ಕೊಡ್ಲೇಬೇಕು..
“ಬೂಟ್ಸ್ ತೆಕ್ಕೊಡ್ಲಿಲ್ಲಾಂದ್ರೇ ಏನ್ಮಾಡ್ತಿಯಾ..?
“ಚಪ್ಪಲಿ ಹಾಕ್ಕೊಂಡು ಹೋಗ್ತೀನಿ..
ಮೊಮ್ಮಗನ ಉತ್ತರಕ್ಕೆ ತಾತಯ್ಯನ ನಗು. “ತಾತ, ನೀನು ದಿನಾ ಭಗವದ್ಗೀತೆ ಯಾಕೆ ಓದುತ್ತಿಯಾ.? ಯಾವುದಾದ್ರೂ ಪರೀಕ್ಷೆ ಬರೆಯುತ್ತಿದ್ದಿಯಾ..?
“ನಾಳೆ ಸ್ವರ್ಗಕ್ಕೆ ಹೋಗಬೇಕಲ್ಲ ಆದಿ. ಅದಕ್ಕೆ ಎಂಟ್ರೆನ್ಸ್ ಟೆಸ್ಟ್ಗೆ ಪ್ರಿಪೇರ್ ಆಗುತ್ತಿದ್ದೇನೆ..
ತಾತ ಮೊಮ್ಮಗ ದೋಸೆ ತಿಂದು ಕೈ ತೊಳೆದುಕೊಳ್ಳಲು ಹಿತ್ತಲಿಗೆ ಬರುವರು. ಮೇಲೆ ರಾಜ್ಯದ ಸಿಎಂ ಡಿಸಿ ಸಭೆಗೆ ವಿಮಾನದಲ್ಲಿ ಬರುತ್ತಿರುವುದು ಗೋಚರಿಸಿ “ತಾತ, ಆಕಾಶದಲ್ಲಿ ವಿಮಾನ ಹಾರಿ ಹೋಗ್ತಿದೆ ಕಾಣಿಸ್ತಿದೆಯಾ.?
“ಮಗುವೇ, ನನ್ನ ಕಣ್ಣು ಇನ್ನೂ ಮಂಜಾಗಿಲ್ಲ. ವಿಮಾನ ಸ್ಪಷ್ಟವಾಗಿ ಕಾಣಿಸ್ತಿದೆ..
“ತಾತ, ವಿಮಾನ ಹೀಗೇ ಹಾರುತ್ತಾ ಮೇಲೆ ಹೋಗ್ತ ಇದ್ರೇ ಎಷ್ಟೊತ್ತಿಗೆ ಸ್ವರ್ಗ ಸೇರುತ್ತೇ..?
“ ಅದರ ಇಂಧನ ಮುಗಿದ ಕೂಡಲೇ.. !
ಕತೆಗಾರರು ತಮ್ಮ ಖಾಲಿ ಹೊಟ್ಟೆಗೆ ಖಾಲಿ ದೋಸೆ ಭರ್ತಿ ಮಾಡಿ ಕೈ ತೊಳೆಯಲು ಹಿತ್ತಲಿಗೆ ಬರುತ್ತಾ ”ಯಾಕೋ ಆದಿ, ಪಾದಕ್ಕೆ ನೀರು ಸುರಿದುಕೊಂಡು ವ್ಯರ್ಥ ಮಾಡುತ್ತಿದ್ದಿಯಾ.. ನೀರು ಅಮೂಲ್ಯವಾದ ವಸ್ತು. ಅದನ್ನು ಹಿತಮಿತವಾಗಿ ಬಳಸಬೇಕು ತಿಳಿಯಿತೆ..?
“ಅಪ್ಪ, ನೀನೇ ಹೇಳಿದ್ದೆಯೆಲ್ಲಾ.. ಶಾಲೆಯ ರಜಾ ದಿನಗಳಲ್ಲಿ ಹೊರಗೆ ಆಟವಾಡಿ ಸಮಯ ವ್ಯರ್ಥ ಮಾಡದೇ ಮನೆಯ ಅಂಗಳದ ಗಿಡಗಳ ಬುಡಕ್ಕೆ ನೀರು ಹಾಕ್ತಾ ಇದ್ರೇ ಅವು ಎತ್ತರವಾಗಿ ಬೆಳೆಯುತ್ತವೆ ಎಂದು..
“ಹೌದು ನೀನು ಜಾಣನಾಗಿ ಎತ್ತರಕ್ಕೆ ಬೆಳೆಯಲೆಂದು ಒಂದು ಬುದ್ಧಿಮಾತು ಹೇಳಿದ್ದೇ..!
“ಅದಕ್ಕೆ ಅಪ್ಪ, ನಾನು ಎತ್ತರವಾಗಿ ಬೆಳೆಯಬೇಕೆಂದು ನನ್ನ ಪಾದಕ್ಕೆ ನೀರು ಹಾಕುತ್ತಿರುವೆ..?
ಇಂತಿಪ್ಪ ಅಪ್ಪ ಮಗ ಇಬ್ಬರೂ ವಿನಯ ಕಾನ್ವೆಂಟಿಗೆ ನೂರು ರೂ. ಪೇ ಮಾಡಿ ಆಟೋದಲ್ಲಿ ಬಂದರು. ಆಗಲೇ ತುಂಬಾ ಪೆರೆಂಟ್ಸ್ಗಳು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಕ್ಯೂನಲ್ಲಿ ನಿಂತಿದ್ದರು. ಅಪ್ಪ ಮಗನ ಸರದಿ ಬಂದು ಈರ್ವರು ಹೆಡ್ ಮಿಸ್ ಛೇಂಬರ್ ಪ್ರವೇಶಿಸಿದರು. “ಯೂ ಆರ್ ಅನಂತಮೂರ್ತಿ..? ಮಿಸ್ ಕೇಳಿದರು. “ನೋ ಐ ಯಾಮ್ ಅನಂದಮೂರ್ತಿ.. ಎಂದರು ಕತೆಗಾರರು. “ಓಕೆ, ಪ್ಲೀಸ್ ಕುಳಿತುಕೊಳ್ಳಿ ಎಂದರು ಹೆಡ್ ಮಿಸ್.
“ವಾಟ್ಸ್ ಯುವರ್ ಸ್ವೀಟ್ ನೇಮ್ ಬೇಬಿ.. ಎಂಬ ಹೆಡ್ ಮಿಸ್ ಪ್ರಶ್ನೆಗೆ ತಬ್ಬಿಬ್ಬಾಗಿ ಆದಿ “ಮೈ ಸ್ವೀಟ್ ನೇಮ್ ಇಸ್ ಜಿಲೇಬಿ.. ರಾತ್ರಿ ಪಪ್ಪ ಮನೆಗೆ ಬರುವಾಗ ಜಿಲೇಬಿ ತಂದು ಹೀಗೆ ಕರೆಯುವರು.. ಎಂದನು
“ಗುಡ್, ನಿಮ್ಮ ತಾತನ ಹೆಸರೇನು..? “ಮೆಣಸಿನಕಾಯಿ ಮಹದೇವ..
“ಯಾಕೆ ಮೆಣಸಿನಕಾಯಿ ಮುಂದೆ ಇಟ್ಟೊಂಡಿದ್ದಾರೆ..?
“ಹಿಂದೆ ಇಟ್ಕೊಂಡ್ರೇ ಉರಿಯುತ್ತೆ.. ಆದಿಯ ಉತ್ತರಕ್ಕೆ ಹೆಡ್ ಮಿಸ್ ಪಿತ್ಥ ನೆತ್ತಿಗೇರಿತು. ಇಂತಹ ತಲೆಹರಟೆ ವಿದ್ಯಾರ್ಥಿಗೆ ನೋ ಅಡ್ಮಿಷನ್ ಎಂದು ನಿರಾಕರಿಸಿದರು. ಆಗ ವಿಧಿಯಿಲ್ಲದೇ ಕತೆಗಾರರು ಮಗನ ಪ್ರತಾಪ ಮಡದಿಗೆ ತಿಳಿಸಿ ಬಿಟ್ಟಗೋಡನಹಳ್ಳಿ ಸರ್ಕಾರಿ ಶಾಲೆಗೆ ಬಿಟ್ಟಿ ಸೇರಿಸಿದರು. ಈಗ ಆದಿಗೆ ಸರ್ಕಾರದಿಂದಲೇ ಉಚಿತ ಪುಸ್ತಕ, ಯೂನಿಫಾರಂ ಕ್ಲಾತ್, ಶೂ ಸಾಗ್ಸ್ ಎಲ್ಲಾ ಬಂತು. ಮದ್ಯಾಹ್ನ ಬಿಸಿ ಊಟವೂ ಉಂಟು. ಈಗ ಪ್ರಸಿದ್ಧ ಕತೆಗಾರರು ಹಾಸನ್ ಸಿಟಿಯಲ್ಲಿ ಮನೆ ಹುಡುಕುತ್ತಿದ್ದಾರೆ. ಅಲ್ಲಿಂದ ಬಿಟ್ಟಗೋಡನಹಳ್ಳಿಗೆ ಮಗನನ್ನು ಕಳಿಸಲು ಫ್ರೀ ಪಾಸ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಗೊರೂರು ಅನಂತರಾಜು,
ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
