ಬೆಂಗಳೂರು, ಜೂ. 8: ಭಾರತದ ಫಾರ್ಮಾಸ್ಯುಟಿಕಲ್ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಕ್ಷೇತ್ರಕ್ಕೆ ಹೊಸ ಬಲ ತುಂಬುವ ನಿಟ್ಟಿನಲ್ಲಿ ಹೈದರಾಬಾದ್ ಮೂಲದ ಜಿವಿಆರ್ಪಿ (GVRP) ಮತ್ತು ಸ್ಟೆಪ್ಸ್ ಬಯೋಸೈನ್ಸಸ್ (Steps Biosciences) ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿವಿಆರ್ಪಿ ಸ್ಟೆಪ್ಸ್ಬಯೋ ರಿಸರ್ಚ್ ಸೆಂಟರ್ (GSRC) ಅನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದೆ.
ಬೆಂಗಳೂರಿನ ಬಿಎಲ್ಆರ್ ಲೈಫ್ ಸೈನ್ಸಸ್ ಕ್ಲಸ್ಟರ್ ಲೈಫ್ಸ್ಕೇಪ್ಸ್ ಆವರಣದಲ್ಲಿ ಸ್ಥಾಪಿಸಲಾದ ಈ 15,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಕೇಂದ್ರವನ್ನು ಫಾರ್ಮುಲೇಶನ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮೀಸಲಾದ ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ರೂಪಿಸಲಾಗಿದೆ.
ಜಾಗತಿಕ ಔಷಧ ಅಭಿವೃದ್ಧಿಯಲ್ಲಿ ಪ್ರಮುಖವಾಗಿರುವ ಹೈ-ಕಾಂಪ್ಲೆಕ್ಸಿಟಿ ಫಾರ್ಮುಲೇಶನ್ಸ್, ಸ್ಟೆರೈಲ್ ಇಂಜೆಕ್ಟಬಲ್ಸ್ ಹಾಗೂ ಸಂಕೀರ್ಣ ಔಷಧ ವಿತರಣಾ ವ್ಯವಸ್ಥೆಗಳ ಸಂಶೋಧನೆಗೆ ಈ ಕೇಂದ್ರವು ವಿಶೇಷ ಒತ್ತು ನೀಡಲಿದೆ. ಜೊತೆಗೆ ಜಿವಿಆರ್ಪಿಯ ಈಗಿನ ಪ್ರಿಕ್ಲಿನಿಕಲ್ ಸಂಶೋಧನಾ ಸಾಮರ್ಥ್ಯಗಳೊಂದಿಗೆ ಸಮನ್ವಯ ಸಾಧಿಸಿ, ಔಷಧ ಅಭಿವೃದ್ಧಿಯ ಸಂಪೂರ್ಣ ಪ್ರಕ್ರಿಯೆಗೆ ಸಮಗ್ರ ವೇದಿಕೆಯನ್ನು ಒದಗಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿವಿಆರ್ಪಿ ಸಹ-ಸಂಸ್ಥಾಪಕ ಕಲ್ಯಾಣ್ ಕೊರಿಸಪಾಟಿ, ಜಿಎಸ್ಆರ್ಸಿ ಕೇಂದ್ರವು ಜಾಗತಿಕ ಔಷಧ ಅಭಿವೃದ್ಧಿ ಕ್ಷೇತ್ರದ ಬದಲಾಗುತ್ತಿರುವ ಅಗತ್ಯಗಳಿಗೆ ಸ್ಪಂದಿಸುವ ವಿಶ್ವದರ್ಜೆಯ ಮೂಲಸೌಕರ್ಯವನ್ನು ಹೊಂದಿದ್ದು, ಭಾರತವನ್ನು ಉನ್ನತ ಮೌಲ್ಯದ ಫಾರ್ಮಾಸ್ಯುಟಿಕಲ್ ಆವಿಷ್ಕಾರಗಳ ಕೇಂದ್ರವನ್ನಾಗಿ ರೂಪಿಸಲು ನೆರವಾಗಲಿದೆ ಎಂದು ಹೇಳಿದರು.
ಸ್ಟೆಪ್ಸ್ ಬಯೋಸೈನ್ಸಸ್ ಸಂಸ್ಥಾಪಕ ಮನೋಜ್ ನೆರೂರ್ಕರ್ ಮಾತನಾಡಿ, ಕೃತಕ ಬುದ್ಧಿಮತ್ತೆ (AI) ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಫಾರ್ಮುಲೇಶನ್ ವಿಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಔಷಧ ಅಭಿವೃದ್ಧಿಯ ಅವಧಿಯನ್ನು ಕಡಿಮೆ ಮಾಡಿ, ರೋಗಿಗಳಿಗೆ ಉತ್ತಮ ಚಿಕಿತ್ಸಾ ವಿಧಾನಗಳನ್ನು ವೇಗವಾಗಿ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
