ಹಾಸನ, ಜೂ. 7: ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಮಕ್ಕಳಿಗೆ ಕೇವಲ ಶೈಕ್ಷಣಿಕ ಜ್ಞಾನ ಸಾಕಾಗುವುದಿಲ್ಲ. ಅವರಲ್ಲಿ ಆತ್ಮವಿಶ್ವಾಸ, ಏಕಾಗ್ರತೆ, ಭಾವನಾತ್ಮಕ ದೃಢತೆ ಹಾಗೂ ಆಂತರಿಕ ಶಕ್ತಿಯನ್ನು ಬೆಳೆಸುವ ಶಿಕ್ಷಣ ಅಗತ್ಯವಾಗಿದೆ ಎಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್ನ ಹಿರಿಯ ಅನುಭವಿ ಶಿಕ್ಷಕರಾದ ಸಂತೋಷ್ ಜೀ ಹೇಳಿದರು.
ಹಾಸನದ ಎಸ್.ಬಿ.ಎಂ. ಕಾಲೋನಿಯ ವರಸಿದ್ಧಿ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿರುವ ಯೋಗ ಕೇಂದ್ರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ್ದ ‘ಇಂಟ್ಯೂಷನ್ ಪ್ರೊಸೆಸ್’ (Intuition Process) ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಮಕ್ಕಳ ಗಮನ ಮತ್ತು ಏಕಾಗ್ರತೆ ಕುಂಠಿತವಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಮಕ್ಕಳನ್ನು Artificial Intelligence ನಿಂದ Absolute Intelligence ಕಡೆಗೆ ಮುನ್ನಡೆಸಬೇಕಿದೆ ಎಂದು ತಿಳಿಸಿದರು. ಈ ತರಬೇತಿಯ ಮೂಲಕ ಮಕ್ಕಳಲ್ಲಿ ತೀಕ್ಷ್ಣ ಏಕಾಗ್ರತೆ, ಉತ್ತಮ ನೆನಪಿನ ಶಕ್ತಿ, ಆತ್ಮವಿಶ್ವಾಸ, ಸೃಜನಶೀಲ ಚಿಂತನೆ ಹಾಗೂ ಭಾವನಾತ್ಮಕ ಸ್ಥಿರತೆಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಣಾಯಾಮ, ಶಕ್ತಿಯುತ ಉಸಿರಾಟದ ತಂತ್ರಗಳು, ಧ್ಯಾನ, ಪ್ರಾಚೀನ ಜ್ಞಾನ ಮತ್ತು ಮನರಂಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿರುವ ಸುಪ್ತ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸುವ ವಿಶಿಷ್ಟ ತರಬೇತಿ ಇದಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಆಯೋಜಕರಾದ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ವೇದಶ್ರೀ ಜೀ ಮಾತನಾಡಿ, ಹಾಸನದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ‘ಇಂಟ್ಯೂಷನ್ ಪ್ರೋಗ್ರಾಂ’ ಅಭೂತಪೂರ್ವ ಯಶಸ್ಸು ಕಂಡಿದ್ದು, ಪೋಷಕರು ಹಾಗೂ ಮಕ್ಕಳಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಬೆಂಬಲ ನೀಡಿದ ಚನ್ನಬಸಪ್ಪ ಜೀ (ರಾಜಣ್ಣ ಜೀ), ಸ್ವಯಂಸೇವಕರಾದ ಲೋಕೇಶ್ ಜೀ, ಶಿವಾಗ್ನಿ ಜೀ, ಪ್ರಕಾಶ್ ಯಾಜಿ ಹಾಗೂ ಕಟ್ಟಾಯ ಶಿವಕುಮಾರ್ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಇಂತಹ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಇನ್ನಷ್ಟು ಮಕ್ಕಳು ಇದರ ಪ್ರಯೋಜನ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.
– ಶಿವಕುಮಾರ್ ಕಟ್ಟಾಯ
