ಹಾಸನದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ದಿನಾಂಕ 14ನೇ ನವೆಂಬರ್ 2026ರಂದು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಖಜಾಂಚಿಗಳಾದ ಶ್ರೀಮತಿ ಸಪ್ನ ಕಿರಣ್ರವರು ಮಕ್ಕಳನ್ನು ಕುರಿತು ಬಾಲ್ಯದ ಸವಿನೆನಪುಗಳನ್ನು ನೆನಪಿಸುತ್ತಾ ಮಕ್ಕಳೆಲ್ಲರೂ ಚಿಕ್ಕಂದಿನಿಂದಲೇ ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು. ಪೋಷಕರು ಮಕ್ಕಳನ್ನು ಅತಿಯಾಸೆ, ಸೋಮಾರಿತನ, ಇತರ ದುಷ್ಟತನಗಳಿಂದ ದೂರವಿರಿಸಿ, ಸಂತೋಷ, ಸಮಾಧಾನ, ಗುರುಹಿರಿಯರಲ್ಲಿ ಭಕ್ತಿ, ದೇಶಾಭಿಮಾನ, ಶಿಸ್ತು, ಇಂತಹ ಸದಾಚಾರಗಳನ್ನು ಮೈಗೂಡಿಸಿ ಸತ್ಪಜೆಗಳಾಗಿ ಬೆಳೆಸಬೇಕೆಂದು ಆಶಿಸಿದರು. ಮಕ್ಕಳು ಉತ್ತಮ ಕನಸುಗಳನ್ನು ನನಸಾಗಿಸುವುದರೊಂದಿಗೆ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಬಯಸುತ್ತಾ ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿದರು.
ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಕೆ.ಎಂ. ನಾಗರಾಜುರವರು, ಮಕ್ಕಳೇ ದೇಶದ ಸಂಪತ್ತು, ಮಕ್ಕಳು ಎಲ್ಲರಲ್ಲಿಯೂ ಬಾಂಧವ್ಯವನ್ನು ಹೊಂದಿರಬೇಕು, ಶೈಕ್ಷಣಿಕ ಹಾಗೂ ಪತ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶಕ್ಕೆ ಕೃತಜ್ಞರಾಗಿ ಬಾಳಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳುವುದರ ಜೊತೆಗೆ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಒಳ್ಳೆಯ ಕನಸುಗಳನ್ನು ಕಾಣಬೇಕು. ಒಳ್ಳೆಯ ಗುರಿಗಳನ್ನು ಇಟ್ಟುಕೊಳ್ಳುವುದರ ಜೊತೆಗೆ ಸಮಯ ಪ್ರಜ್ಞೆ ಬಹಳ ಮುಖ್ಯ, ಮಕ್ಕಳು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕ್ರಿಸ್ಟೀನಾ ಎಸ್. ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಮುಖಂಡರಾದ ಕು. ಸಾರಿಕಾ ಸಿ.ಕೆ. ಹಾಗೂ ಚಿ. ವರುಣ್ ಜಿ.ಬಿ. ಇವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಾ ವೇದಿಕೆಯನ್ನು ಅಲಂಕರಿಸಿ, ತಮ್ಮ ಸಹಪಾಠಿ ಮಿತ್ರರಿಗೆಲ್ಲಾ ಮಕ್ಕಳ ದಿನಾಚರಣೆಯ ಶುಭ ಕೋರಿದರು.
ಶಿಕ್ಷಕರು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ಶಾಲೆಯ ಎಲ್ಲ ವಿದ್ಯಾರ್ಥಿಗಳು ತಮ್ಮ ದಿನಾಚರಣೆಯನ್ನು ಅತ್ಯಂತ ಹರ್ಷದಿಂದ ಸಂಭ್ರಮಿಸಿದರು. ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
