ಹಾಸನ: ವಿದ್ಯಾರ್ಥಿಗಳು ಮಾರ್ಕ್ಸ್ಮೇನಿಯಾದಿಂದ ಹೊರಬಂದು ಸಮಾಜದೊಂದಿಗೆ ಬೆರೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಾಸನ ಜಿಲ್ಲೆಯ ಎಡಿಸಿ ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಸುದೈವ ಕುಟುಂಬಕಂ ಎಜುಕೇಶನಲ್ ಟ್ರಸ್ಟ್ನ ಪ್ರೈಡ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಪದವಿಪೂರ್ವ ಸಮಾರಂಭ ಹಾಗೂ ಪ್ರಥಮ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ನಗರದ ಜ್ಞಾನಾಕ್ಷಿ ಕನ್ವೆನ್ಷನ್ ಹಾಲ್ನಲ್ಲಿ ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಹಾಸನ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ನಾಗರಾಜು ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹಿರಿಯರು ಮರೆಯುತ್ತಿದ್ದಾರೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಲ್ಲ; ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೂ ಆಗಿದೆ ಎಂದರು.
ರಾಮಾಯಣ ಕೇವಲ ಪುರಾಣವಲ್ಲ. ಅದರಲ್ಲಿರುವ ಆದರ್ಶ ಪಾತ್ರಗಳು ಮತ್ತು ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಇಂತಹ ಮೌಲ್ಯಗಳನ್ನು ಅರಿತುಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಡಿಸಿ ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಕೀಳರಿಮೆಯನ್ನು ಬಿಟ್ಟು ಸ್ವತಃ ತನ್ನನ್ನು ಗೌರವಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಪರಿಶುದ್ಧ ಮನಸ್ಸು, ಉತ್ತಮ ಸಂಸ್ಕಾರ ಹಾಗೂ ಗುರು-ಹಿರಿಯರ ಮೇಲಿನ ಗೌರವ ಜೀವನದ ಯಶಸ್ಸಿನ ಕೀಲಿಕೈಗಳಾಗಿವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳ ಹಿಂದೆ ಓಡುವುದನ್ನು ಬಿಟ್ಟು, ಮಾರ್ಕ್ಸ್ಮೇನಿಯಾದಿಂದ ಹೊರಬಂದು ಸಮಾಜದೊಂದಿಗೆ ಬೆರೆಯಬೇಕು. ಸಮಾಜದ ಆಗುಹೋಗುಗಳನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣತಜ್ಞ ಹಾಗೂ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅಧ್ಯಾಪನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಜಿ. ಜವರೇಗೌಡ ಮಾತನಾಡಿ, ಪ್ರತಿಯೊಬ್ಬರೂ ತಂದೆ-ತಾಯಿ, ಗುರುಗಳು ಹಾಗೂ ಸಮಾಜದ ಋಣವನ್ನು ಹೊತ್ತಿದ್ದೇವೆ. ಆ ಋಣವನ್ನು ಅಲ್ಪಮಟ್ಟಿಗಾದರೂ ತೀರಿಸುವ ಸಂಕಲ್ಪ ಮಾಡಬೇಕು ಎಂದರು.
ಅಹಂಕಾರವೇ ಮನುಷ್ಯನ ಪ್ರಮುಖ ಶತ್ರು. ಅಹಂಕಾರ ಮತ್ತು ದುರಹಂಕಾರವನ್ನು ತೊರೆದು ನಿರಹಂಕಾರಿಗಳಾಗಿ ಬದುಕಿದಾಗ ಮಾತ್ರ ನಾವು ಕಲಿತ ವಿದ್ಯೆಗೆ ನಿಜವಾದ ಮಾನ್ಯತೆ ದೊರೆಯುತ್ತದೆ. ಇದರಿಂದ ಮೌಲ್ಯಯುತ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಸುದೈವ ಕುಟುಂಬಕಂ ಟ್ರಸ್ಟ್ನ ಅಧ್ಯಕ್ಷ ನರೇಶ್, ಕಾರ್ಯದರ್ಶಿ ನಂದೀಶ್, ಟ್ರಸ್ಟ್ನ ಸದಸ್ಯರು ಹಾಗೂ ಎಲ್ಲಾ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಪ್ರೈಡ್ ಪದವಿ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಎ.ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ಕಾರ್ಯಕ್ರಮದ ಮುಂದುವರಿದ ಭಾಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ, ಸಮಾರಂಭಕ್ಕೆ ಮೆರುಗು ತಂದವು.
