ಹಾಸನ, ಏ.25 (RNP): ವೀರಶೈವ ಲಿಂಗಾಯತ ಸಮುದಾಯದಲ್ಲಿ ಲಿಂಗಧಾರಣೆ, ವಿಭೂತಿ ಧಾರಣೆ, ರುದ್ರಾಕ್ಷಿ ಧಾರಣೆ ಹಾಗೂ ಇಷ್ಟಲಿಂಗ ಪೂಜೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಉಚಿತ ಲಿಂಗಧಾರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ನುಗ್ಗೆಹಳ್ಳಿ ಮಠದ ಶ್ರೀ ಮಹೇಶ್ವರಶಿವಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ರೀಕ್ಷೇತ್ರ ತಣ್ಣೀರುಹಳ್ಳ ಮಠದಲ್ಲಿ ವಿಶ್ವ ವೀರಶೈವ ಲಿಂಗಾಯತ ಮಹಾವೇದಿಕೆ ವತಿಯಿಂದ ಆಯೋಜಿಸಿದ್ದ ಉಚಿತ ಲಿಂಗಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಅಭಿವೃದ್ಧಿ ಹಾಗೂ ಏಕತೆಗಾಗಿ ಇಂತಹ ಧಾರ್ಮಿಕ ಚಟುವಟಿಕೆಗಳು ಬಹಳ ಮುಖ್ಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಏಪ್ರಿಲ್ 26ರಂದು ನಡೆಯಲಿರುವ ವಿಶ್ವಗುರು ಬಸವೇಶ್ವರರ 896ನೇ ಜಯಂತೋತ್ಸವ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 119ನೇ ಜಯಂತೋತ್ಸವ, ಲಿಂಗೈಕ್ಯ ಶ್ರೀ ಶಿವಲಿಂಗ ಮಹಾಸ್ವಾಮೀಜಿಯವರ 92ನೇ ಜಯಂತೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ದೀಕ್ಷಾ ವಟುಗಳಿಗೆ ಉಚಿತವಾಗಿ ಲಿಂಗಧಾರಣೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ 68 ವಟುಗಳಿಗೆ ಕರಡಿಗೆ, ಲಿಂಗ, ಶಿವದಾರ, ಪಂಚೆ ಹಾಗೂ ಟವಲ್ಗಳನ್ನು ವಿತರಿಸಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಲಾಯಿತು. ವಿಶ್ವ ವೀರಶೈವ ಲಿಂಗಾಯತ ಮಹಾವೇದಿಕೆಯ ಮೂಲಕ ಇದುವರೆಗೆ ಸುಮಾರು 27,600ಕ್ಕೂ ಹೆಚ್ಚು ವಟುಗಳಿಗೆ ಲಿಂಗಧಾರಣೆ ಹಾಗೂ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿರುವುದಾಗಿ ತಿಳಿಸಲಾಯಿತು. ಕರ್ನಾಟಕದ ಜೊತೆಗೆ ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಧಾರ್ಮಿಕ ಜಾಗೃತಿ ಕಾರ್ಯಗಳು ನಡೆಯುತ್ತಿರುವುದನ್ನು ಅವರು ಪ್ರಶಂಸಿಸಿದರು.

ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಲಿಂಗಪೂಜೆ ಅತ್ಯಂತ ಶ್ರೇಷ್ಠವಾದದ್ದು, ಗುರುಗಳಿಂದ ಲಿಂಗಧಾರಣೆ ಮಾಡಿಸಿಕೊಳ್ಳುವುದರಿಂದ ಆತ್ಮಿಕ ಉನ್ನತಿ ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ರಾಮೇಗೌಡನಪುರ, ಗೋಪಾಲಪುರ, ಹಂಗ್ರಾಪುರ, ಕಳ್ಳಿಪುರ, ಬೀಚನಹಳ್ಳಿ, ಅಂಬಲಿ, ಸಂಕಲಾಪುರ ಮಠಗಳ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಶಿಷ್ಯರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
