ಹಾಸನ : ನಮ್ಮೊಳಗಿನ ಉತ್ಕಟತನ, ಭಾವತೀವ್ರತೆಯನ್ನು ಅದುಮಿಟ್ಟುಕೊಳ್ಳಲಾಗದ ಹಾಗೂ ಅನಿವಾರ್ಯತೆ ಎಂದಾಗ ಮಾತ್ರ ಕಾವ್ಯವಾಗಿ ಹೊರಹೊಮ್ಮಿದರೆ ಒಳ್ಳೆಯ ಕವಿತೆ ಹುಟ್ಟಲು ಸಾಧ್ಯ. ಪ್ರಕ್ಷುಬ್ದ ಕಾಲಘಟ್ಟದಲ್ಲಿ ಕಾವ್ಯದ ಅನಿವಾರ್ಯತೆ ಹೆಚ್ಚಿದೆ ಎಂದು ಪ್ರಸಿದ್ಧ ಕವಯಿತ್ರಿ ಜ.ನಾ. ತೇಜಶ್ರೀ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ವತಿಯಿಂದ ಚಿಕ್ಕಕೊಂಡಗೊಳದ ಎಚ್.ಎಸ್. ಭಾನುಮತಿಯವರ ನಿವಾಸದಲ್ಲಿ ಹಮ್ಮಿಕೊಂಡಿದ್ದ “ಹಾಸನ ಜಿಲ್ಲಾ ದಸರಾ ಕವಿಗೋಷ್ಠಿ” ಉದ್ಘಾಟಿಸಿ ಮಾತನಾಡಿ ದ್ವೇಷ, ರಾಜಕಾರಣ, ಅಧಿಕಾರ ಎಲ್ಲವೂ ಮೇಲಾಟ ಆಡುತ್ತಾ ಬದುಕು ಕಗ್ಗಂಟಾಗಿರುವ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ಕವಿತೆಯ ಕೈಹಿಡಿದು ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎನ್ನುವ ಕವಿ ವಾಂಛಲ್ಯವನ್ನು ಬೆನ್ನುತಟ್ಟಲೇಬೇಕು. ಮನಸ್ಸಿನಲ್ಲಿ ಹುಟ್ಟಿದ ಒಂದು ಸ್ವರ ಅಥವಾ ರಾಗ ಕೈಯಿಗೆ ಹರಿಯಬೇಕು, ಕೈ ಅದನ್ನು ಅನುವಾದಿಸಬೇಕು, ಬೆರಳು ಸ್ಪಂದಿಸಬೇಕು. ಈ ಎಲ್ಲವೂ ಒಟ್ಟಿಗೆ ಆಗಬೇಕು.
ಯಾವುದೋ ಒಂದು ಕ್ಷಣ ದೇಹವು ಮನಸ್ಸಿನ ಜೊತೆ ಕೂಡಿದಾಗ ರಾಗ ಮಿಡಿಯುತ್ತೆ ಅದನ್ನೇ ಸೃಜನಶೀಲತೆ ಎನ್ನುವರು. ಪ್ರತಿಯೊಬ್ಬ ಕವಿ ಇಲ್ಲಿತನಕ ಎಷ್ಟೊಂದು ಕವಿತೆ ಬಂದಿವೆ. ನನ್ನದು ಹೇಗೆ ಭಿನ್ನ, ಯಾಕೆ ಭಿನ್ನ ಎಂದು ಆಲೋಚಿಸಬೇಕಾದರೆ ಕವಿಗೆ ವಿಸ್ತಾರವಾದ ಓದು ಇದ್ದಾಗ ಮಾತ್ರ ಸಾಧ್ಯ. ಇಲ್ಲವಾದರೆ ಕವಿತೆ ಎನ್ನುವುದು ಕೇವಲ ಹೇಳಿಕೆ ಅಥವಾ ವರದಿ ಆಗುತ್ತದೆ. ಕಾವ್ಯ ಎಂದರೆ ನಿರಂತರ ಪ್ರಯತ್ನ, ನವೀನ ಕಲಿಕೆ. ಕಲೆ ಅಥವಾ ಕವಿತೆ ನಮ್ಮ ಅಂತರಂಗ ನೋಡಿಕೊಂಡು ಮಾತಾಡುವಂಥದ್ದು. ಆಗ ಆ ಮಾತು ಇನ್ನೊಂದು ಮನಸ್ಸನ್ನು ಮುಟ್ಟುತ್ತದೆ. ಕೇವಲ ಭಾವನೆಯಿಂದ ಕವಿತೆ ಆಗಲ್ಲ, ಕೇವಲ ವಿಚಾರದಿಂದ ಕವಿತೆ ಆಗಲ್ಲ, ಇವೆರಡೂ ಒಟ್ಟಿಗೆ ಸಂಭವಿಸಬೇಕು ಎಂದರು.

ಹಿರಿಯ ಸಾಹಿತಿ ತಿರುಪತಿಹಳ್ಳಿ ಶಿವಶಂಕರಪ್ಪ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾವ್ಯ ಕೇವಲ ಭಾವಾಭಿವ್ಯಕ್ತಿಯಾಗದೇ ಸಮಾಜ ವಿಕಸನಕ್ಕೆ ನಾಂದಿ ಹಾಡಬೇಕು. ಸಮಾಜದ ಕಟ್ಟಕಡೆಯ ತಲ್ಲಣಗಳಿಗೂ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನೂರಾರು ಹೊಸ ಕವಿಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಾ ಬರುತ್ತಿದೆ. ಇಲ್ಲಿ ವಾಚಿಸುವ ಕವಿಗಳು, ಕಾವ್ಯದಿಂದ ಕಾವ್ಯಕ್ಕೆ ಉತ್ಕೃಷ್ಟತೆ ಹೊಂದುತ್ತಾ ಹೋಗಬೇಕು. ನಮ್ಮ ಕಾವ್ಯ ಪರಂಪರೆಯ ಐತಿಹ್ಯ ಅರಿಯಬೇಕು. ಪ್ರತಿಯೊಬ್ಬ ಕವಿಗೂ ಅಧ್ಯಯನ ಮತ್ತು ಅಧ್ಯಾಪನಗಳು ಬಹಳ ಮುಖ್ಯ. ಇಂದಿನ ಕವಿಗೋಷ್ಠಿಯಲ್ಲಿ ಪ್ರೀತಿ, ಪ್ರೇಮ, ಪ್ರಕೃತಿ, ದಸರಾ ಹಾಗೂ ನಾಡುನುಡಿಯ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದವು ಎಂದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ ಕಾವ್ಯಕ್ಕೆ ಸಮಾಜಕ್ಕೆ ಬದಲಾವಣೆ ಮಾಡುವ ಶಕ್ತಿಯಿದೆ. ಸಮಾಜವನ್ನು ತಿದ್ದುವ ಶಕ್ತಿ ಇರೋದು ಬರವಣಿಗೆಗೆ ಮಾತ್ರ. ಸಾಹಿತ್ಯ, ಮಾಧ್ಯಮ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಒಂದು ಕಾಲ ಘಟ್ಟದ ಪರಂಪರೆಯನ್ನು ದಾಖಲಿಸುವುದೇ ಸಾಹಿತ್ಯ. ಸಾಹಿತಿಗಳು ಪ್ರಾಮಾಣಿಕತೆ ಹಾಗೂ ಪಾರದರ್ಶಕವಾಗಿದ್ದರೆ ಅವರಿಂದ ಸೃಜಿಸಲ್ಪಟ್ಟ ಸಾಹಿತ್ಯ ಸಾರ್ವತ್ರಿಕವಾಗುತ್ತದೆ ಎಂದರು.

ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಜಿಲ್ಲಾ ಉಪಾಧ್ಯಕ್ಷೆ ಎಚ್.ಎಸ್. ಭಾನುಮತಿ ಮಾತನಾಡಿದರು.
*ಹಾಸನ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿ*
ಹಾಸನ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿಯಲ್ಲಿ ಸಕಲೇಶಪುರದ ಲಲಿತ ಎಸ್. ರವರ ‘ಅಯೋಮಯ’; ಗೊರೂರು ಅನಂತರಾಜುರವರ ‘ಆಹ್ವಾನ’; ಜಯಶಂಕರ್ ಬೆಳಗುಂಬರವರ ‘ಹಳೆಯ ಮಧುರ ನೆನಪೇ’; ಗ್ಯಾರಂಟಿ ರಾಮಣ್ಣನವರ ‘ನಮ್ಮವರಲ್ಲದವರು’; ಗಿರಿಜಾ ನಾಗೇಶ್ ಅವರ ‘ಪ್ರೀತಿಯ ಮನೆ’; ಪದ್ಮಾವತಿ ವೆಂಕಟೇಶ್ ಅವರ ‘ದಸರ ಉತ್ಸವ’; ಭಾರತಿ ಎಚ್.ಎನ್.ರವರ ‘ಹೆಣ್ಣು’; ಚನ್ನರಾಯಪಟ್ಟಣದ ಹೇಮಲತಾರವರ ‘ನವರಾತ್ರಿ ಮೈಸೂರು ದಸರಾ’; ಅರಕಲಗೂಡಿನ ಚಂದ್ರಶೇಖರ್ ಹಾನಗಲ್ ಅವರ ‘ಚುಟುಕುಗಳು’; ಚನ್ನರಾಯಪಟ್ಟಣದ ಗಿರೀಶ್ ಅವರ ‘ಶೈಲಪುತ್ರಿ’; ಚಂದ್ರಕಲಾ ಎಂ. ಆಲೂರು ಅವರ ‘ನಾಮಬಲ’; ಬೇಲೂರಿನ ಶೋಭಾ ಹರೀಶ್ ಅವರ ‘ಮೈಸೂರು ದಸರಾ’; ಮಂಜುಳಾ ಪ್ರಸಾದ್ ಅವರ ‘ಬಾಳ ಮುಸ್ಸಂಜೆಯಲಿ’; ಸಾವಿತ್ರಿಯವರ ‘ಪ್ರೀತಿ’; ಎಚ್.ಎಸ್. ಭಾನುಮತಿಯವರ ‘ನೀ ಜನನಿ’; ಸೇರಿದಂತೆ ಹಲವರು ಕಾವ್ಯ ವಾಚಿಸಿದರು.
ಈ ಸಂದರ್ಭದಲ್ಲಿ ಕೆ.ಟಿ.ಜಯಶ್ರೀ, ಕಾಮಾಕ್ಷಿ, ಪಂಕಜ, ದುಂಬಿತ್ ಉಪಸ್ಥಿತರಿದ್ದರು. ಸುನೀತ ಕೆ.ಎಲ್.ಸ್ವಾಗತಿಸಿದರು, ಜಯಶೀಲ ನಿರೂಪಿಸಿದರು, ಶಾಂತಕುಮಾರಿ ಮತ್ತು ಸಾವಿತ್ರಿ ಪ್ರಾರ್ಥಿಸಿದರು.
