ಹಾಸನ, ಜೂ.26: ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವನ್ನು ಜೂನ್ 25ರಂದು ವಿಜೃಂಭಣೆಯಿಂದ ನಡೆಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು ಪಥಸಂಚಲನ ನಡೆಸುವ ಮೂಲಕ ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವದ ಮಹತ್ವವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಆಯ್ಕೆಯಾದ ಕು. ಸಾರಿಕಾ ಸಿ.ಕೆ. ಅವರು ಶಾಲಾ ನಾಯಕಿಯಾಗಿ ಹಾಗೂ ಚಿ. ವರುಣ್ ಜಿ.ಬಿ. ಅವರು ಉಪನಾಯಕರಾಗಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೆ.ಸಿ.ಪಿ. ಗ್ರೂಪ್ಸ್ನ ವ್ಯವಸ್ಥಾಪಕರು ಹಾಗೂ ಶಾಲೆಯ ಕಾರ್ಯದರ್ಶಿ ಹೆಚ್.ಪಿ. ಕಿರಣ್ ಗೌಡ ಭಾಗವಹಿಸಿದ್ದರು. ಇತ್ತೀಚೆಗೆ ‘ಮೈಸೂರು ವಿಭಾಗದ ಜನಮೆಚ್ಚಿದ ನಾಯಕ–2025’ ಪ್ರಶಸ್ತಿಗೆ ಭಾಜನರಾದ ಅವರನ್ನು ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಪಿ. ಕಿರಣ್ ಗೌಡ, “ನಾಯಕತ್ವ ಎಂದರೆ ಕೇವಲ ಹುದ್ದೆಯಲ್ಲ; ಶಿಸ್ತು, ಸಮಯಪ್ರಜ್ಞೆ, ಉತ್ತಮ ಭಾಷಾ ಕೌಶಲ್ಯ, ಉತ್ತಮ ನಡವಳಿಕೆ ಹಾಗೂ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆ ನಾಯಕನ ಗುಣಗಳಾಗಿವೆ. ವಿದ್ಯಾರ್ಥಿ ನಾಯಕರು ಇತರರಿಗೆ ಮಾದರಿಯಾಗಬೇಕು” ಎಂದು ಕರೆ ನೀಡಿದರು.
ಇದೇ ವೇಳೆ ಶಾಲೆಯ ವಿವಿಧ ವರ್ಣತಂಡಗಳ ನಾಯಕರಿಗೆ ಬಾವುಟಗಳನ್ನು ವಿತರಿಸಲಾಯಿತು.
ಶಾಲೆಯ ಖಜಾಂಚಿ ಸಪ್ನ ಕಿರಣ್ ಮಾತನಾಡಿ, ವಿದ್ಯಾರ್ಥಿ ನಾಯಕರು ಶಾಲೆಯ ಶಿಸ್ತು ಮತ್ತು ನಿಯಮಗಳನ್ನು ಪಾಲಿಸುವುದರ ಜೊತೆಗೆ ಇತರ ವಿದ್ಯಾರ್ಥಿಗಳಿಗೆ ಆದರ್ಶವಾಗಿರಬೇಕು ಎಂದು ತಿಳಿಸಿದರು.
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ಗಳನ್ನು ವಿತರಿಸಿ ಶುಭ ಹಾರೈಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
