ಕೆ.ಆರ್.ಪೇಟೆ,ಜೂ.26: ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿ, ಗುರಿ ಸಾಧನೆ ಮಾಡಬೇಕು ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಹೇಳಿದರು.
ಅವರು ತಾಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ, ಹಿರಳಹಳ್ಳಿ, ಊಚನಹಳ್ಳಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವುದು ಆತಂಕ ಕಾರಿ ಬೆಳವಣಿಗೆಯಾಗಿದೆ. ಸರ್ಕಾರಿ ಶಾಲೆಗಳ ಉಳಿವು ಹಾಗೂ ಬೆಳವಣಿಗೆಗೆ ನಾಗರೀಕ ಸಮಾಜದ ಪ್ರತಿಯೊಬ್ಬರು ಕೈಜೋಡಿಸಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ ಶ್ರೀನಿವಾಸ್ ವಿದ್ಯಾ ಬುದ್ಧಿಯ ಜ್ಞಾನದ ಬೆಳಕಿನ ಸನ್ಮಾರ್ಗವನ್ನು ನೀಡಿ ಬದುಕಿನ ದಾರಿಗೆ ಮಾರ್ಗದರ್ಶಿಯಾಗಿರುವ ಸರ್ಕಾರಿ ಶಾಲೆಗಳ ಉಳಿವಿಗೆ ನಾವುಗಳು ದೃಢವಾದ ಸಂಕಲ್ಪವನ್ನು ಮಾಡುವುದು ಇಂದಿನ ಅನಿವಾರ್ಯವಾಗಿದೆ. ಸರ್ಕಾರಿ ಶಾಲೆಗಳಿಗೆ ಸಮಾಜದಲ್ಲಿ ಉಳ್ಳವರು ಹಾಗೂ ದಾನಿಗಳು ತಮ್ಮ ಕೈಲಾದ ನೆರವನ್ನು ಧಾರಾಳವಾಗಿ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕೈ ಮುಗಿದು ಮನವಿ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣವು ಉಚಿತವಾಗಿ ದೊರೆಯುತ್ತಿದ್ದರೂ, ಪೋಷಕರು ಆಂಗ್ಲ ಭಾಷಾ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಿದ್ದಾರೆ. ರಾಜ್ಯ ಸರ್ಕಾರವು ನೂತನವಾಗಿ ಆರಂಭಿಸಿರುವ ಕೆಪಿಎಸ್ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಆಂಗ್ಲ ಭಾಷಾ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ದಾನಿಗಳ ಸಹಕಾರದಿಂದ ಮಕ್ಕಳ ಮನೆಗಳನ್ನು ಆರಂಭಿಸಿ ಎಲ್ಲಾ ಮಕ್ಕಳಿಗೂ ಪೂರ್ವ ಪ್ರಾಥಮಿಕ ಹಂತದಿಂದಲೇ ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡಲಾಗುತ್ತಿದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಶಿಕ್ಷಣವನ್ನು ಕೊಡಿಸಿ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಮಾರಂಭದಲ್ಲಿ ಮುರುಕನಹಳ್ಳಿ, ಹಿರಳಹಳ್ಳಿ, ಊಚನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು, ಶಿಕ್ಷಕರುಗಳು ಹಾಗೂ ಪೋಷಕರು, ಮರುಕನಹಳ್ಳಿ, ಹಿರಳಹಳ್ಳಿ, ಊಚನಹಳ್ಳಿ ಗ್ರಾಮದ ಮುಖಂಡರುಗಳು ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್
