ಹಾಸನ, ಜೂ. 8: ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ವಿರೋಧಿಸಿ ಹಾಗೂ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿ ಕೆಇಬಿ ನೌಕರರು ಹಾಸನದ ಕೆಇಬಿ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಮತ್ತು ವಿವಿಧ ಸಂಘಟನೆಗಳ ಮುಖಂಡರು, ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದರೆ ವಿದ್ಯುತ್ ದರಗಳು ನಿಯಂತ್ರಣ ತಪ್ಪಿ ಏರಿಕೆಯಾಗಲಿದ್ದು, ಅದರ ನೇರ ಹೊರೆ ಜನಸಾಮಾನ್ಯರ ಮೇಲೆ ಬೀಳಲಿದೆ ಎಂದು ಆರೋಪಿಸಿದರು.

ರೈತರಿಗೆ ನೀಡಲಾಗುತ್ತಿರುವ ಉಚಿತ ಪಂಪ್ಸೆಟ್ ವಿದ್ಯುತ್ ಸೌಲಭ್ಯ ಹಾಗೂ ಗೃಹಜ್ಯೋತಿ ಯೋಜನೆ ಸೇರಿದಂತೆ ಸರ್ಕಾರದ ಹಲವು ಉಚಿತ ಯೋಜನೆಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಖಾಸಗೀಕರಣದಿಂದ ಕೃಷಿ ಕ್ಷೇತ್ರದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದು, ರೈತರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಸರ್ಕಾರಿ ವಿದ್ಯುತ್ ಸಂಸ್ಥೆಗಳ ಖಾಸಗೀಕರಣದಿಂದ ಮೀಸಲಾತಿ ವ್ಯವಸ್ಥೆ ಮತ್ತು ಉದ್ಯೋಗ ಭದ್ರತೆಗೆ ಕುತ್ತು ಉಂಟಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಸರ್ಕಾರಿ ನೇಮಕಾತಿಯಂತೆ ಮೀಸಲಾತಿ ಅವಕಾಶಗಳು ಇರುವುದಿಲ್ಲ. ಇದರಿಂದ ಹಿಂದುಳಿದ ವರ್ಗಗಳು ಸೇರಿದಂತೆ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಟಾಟಾ ಪವರ್ ಕಂಪನಿಯು ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ತಿರಸ್ಕರಿಸಬೇಕು ಎಂದು ಆಗ್ರಹಿಸಿದ ಅವರು, ಸಾರ್ವಜನಿಕರು ಸಹ ತಮ್ಮ ಆಕ್ಷೇಪಣೆಗಳನ್ನು ಕೆಇಆರ್ಸಿಗೆ ಸಲ್ಲಿಸುವಂತೆ ಮನವಿ ಮಾಡಿದರು.
ಜೂನ್ 23, 2026 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದ್ದು, ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣದಿಂದ ರಕ್ಷಿಸಲು ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
“ಕರ್ನಾಟಕ ರಾಜ್ಯದ ವಿದ್ಯುತ್ ಕಂಪನಿಗಳನ್ನು ಉಳಿಸಿ, ಬೆಳೆಸಬೇಕು. ಖಾಸಗೀಕರಣ ಬೇಡ, ಜನರ ವಿದ್ಯುತ್ ಹಕ್ಕು ಉಳಿಯಬೇಕು” ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
