ಬೆಂಗಳೂರು, ಜೂ. 7: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಗರದ 15 ವಿವಿಧ ಸ್ಥಳಗಳಲ್ಲಿ ಬೃಹತ್ ಪರಿಸರ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪದಾಧಿಕಾರಿಗಳು, ವಿವಿಧ ವಿಧಾನಸಭಾ ಘಟಕಗಳ ಅಧ್ಯಕ್ಷರು ಹಾಗೂ ಕನ್ನಡಪರ ಕಾರ್ಯಕರ್ತರಿಗೆ ಜಿಲ್ಲಾ ಅಧ್ಯಕ್ಷ ನಾ. ಶ್ರೀಧರ್ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕವಿ, ಚಿಂತಕ ಹಾಗೂ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಮನುಷ್ಯನ ಆಧುನಿಕ ಜೀವನಶೈಲಿಯೇ ಪರಿಸರ ಮತ್ತು ಪ್ರಕೃತಿ ಹಾಳಾಗಲು ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

“ಪರಿಶುದ್ಧ ಗಾಳಿ, ಬೆಳಕು, ನೀರು, ಅಗ್ನಿ ಹಾಗೂ ಭೂಮಿ ಮಾಲಿನ್ಯಗೊಳ್ಳಲು ನಮ್ಮ ಜೀವನ ಕ್ರಮವೇ ಕಾರಣವಾಗಿದೆ. ಕುಟುಂಬ ಮತ್ತು ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಲು ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಮಕ್ಕಳನ್ನು ಗ್ರಾಮೀಣ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಮರ, ಗಿಡ, ಕಾಡು, ಹೊಲ-ಗದ್ದೆ, ಪ್ರಾಣಿ-ಪಕ್ಷಿಗಳ ಪರಿಚಯ ಮಾಡಿಸಬೇಕು. ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಗಳನ್ನು ಸಸಿ ನೆಡುವ ಮೂಲಕ ಆಚರಿಸುವ ಸಂಸ್ಕೃತಿ ಬೆಳೆಸಬೇಕು” ಎಂದು ಅವರು ಕರೆ ನೀಡಿದರು.
ಗಾಂಧಿನಗರದ ಸಮಾಜಸೇವಕ ಹಾಗೂ ಕಾಂಗ್ರೆಸ್ ಮುಖಂಡ ಶರವಣ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆ ಸಮಾಜದ ಮೊದಲ ಆದ್ಯತೆಯಾಗಬೇಕು ಎಂದರು. ನಗರ ಪ್ರದೇಶಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ ಹಾಗೂ ಗಿಡಮರಗಳ ಬೆಳವಣಿಗೆಗೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು.

ಪರಿಸರ ಕುರಿತ ಈ ಬೃಹತ್ ಜನಜಾಗೃತಿ ಅಭಿಯಾನದಲ್ಲಿ 500ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿಯೂ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಜನ ವಿಜ್ಞಾನ ಚಳವಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಘಟಕದ ಅಧ್ಯಕ್ಷ ಹಾಗೂ ಶಿಕ್ಷಕ ಮಂಜುನಾಥ್, ಬಿಇಎಲ್ನ ಎಂ. ಪ್ರಭು, ಹೋರಾಟಗಾರ ಶಿವರಾಮ್, ಬಿಹೆಚ್ಇಎಲ್ ಕಾರ್ಮಿಕ ಮುಖಂಡ ಹನುಮಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಾಯಕಿ ಅಂಬುಜಾ ಬೀರೇಶ್ ಪರಿಸರ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
