ಹಾಸನ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಅವರ ಸರ್ವಾಧಿಕಾರಿ ಧೋರಣೆ ಮತ್ತು ಅಪ್ರಜಾಸತ್ತಾತ್ಮಕ ನಡವಳಿಕೆ ವಿರುದ್ಧ ಕನ್ನಡ ಸಾಹಿತಿಗಳು, ಜಾನಪದ ತಜ್ಞರು, ಜನಪರ ಹೋರಾಟಗಾರರು ಹಾಗೂ ಕನ್ನಡ ಪ್ರೇಮಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ, ಕಸಾಪ ಜಿಲ್ಲಾಧ್ಯಕ್ಷರೂ ಕೂಡ ಜನರಿಂದ ಆಯ್ಕೆಯಾದವರು ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ತಮ್ಮನ್ನು ಪ್ರಶ್ನೆ ಮಾಡುವವರಿಗೆ ನೋಟಿಸ್ ನೀಡುವ ಕೆಲಸ ಮಾಡಿದ್ದಾರೆ ಎಂದು ಜೋಷಿ ವಿರುದ್ಧ ಕಿಡಿಕಾರಿದರು.
ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಕೂರಿಸಿಕೊಂಡು ತಮಗೆ ಇಷ್ಟ ಬಂದಂತೆ ಪರಿಷತ್ ನಡೆಸಿಕೊಂಡು ಹೋಗುತ್ತಿದ್ದಾರೆ. ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರೂ.ಅವ್ಯವಹಾರ ನಡೆದಿದೆ ಎಂದು ದೂರು ದಾಖಲಾಗಿದೆ. ಅದೂ ಅಲ್ಲದೆ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಗೆ ಬರಬೇಕಾದ ಹಣವನ್ನೂ ಕೊಡದೇ ಇರುವುದನ್ನು ಖಂಡಿಸಿದರು.
ಒಬ್ಬ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿ ಪರಿಷತ್ತಿನ ಚುಕ್ಕಾಣಿ ಹಿಡಿದಿರುವುದು ಕನ್ನಡಿಗರ ದುರಂತವೇ ಸರಿ. ಇದೀಗ ಏಕಾಏಕಿ ಕಸಪಾ ಬೈಲಾ ತಿದ್ದುಪಡಿಗೆ ಮುಂದಾಗಿದ್ದಾರೆ. ಮಹೇಶ್ ಜೋಷಿ ಅವರು ತಮ್ಮ ವರ್ತನೆಯಿಂದ ತಾವೊಬ್ಬ ದುರಹಂಕಾರಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಇಂತಹವರು ಬೈಲಾ ತಿದ್ದುಪಡಿ ಮಾಡಲು ಮುಂದಾಗಿರುವುದು ಆತಂಕಕಾರಿ. ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿರುವ ಜೋಷಿಯನ್ನು ಅಮಾನತ್ತಿನಲ್ಲಿಟ್ಟು ಕೇಂದ್ರ ಪರಿಷತ್ತಿಗೆ ಆಡಳಿತಾಧಿಕಾರಿ ನೇಮಿಸಬೇಕೆಂದು ಆಗ್ರಹಿಸಿದರು.
ಸಿಐಟಿಯು ಧರ್ಮೇಶ್ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿದೆ. ನಾಡು-ನುಡಿ ರಕ್ಷಣೆಯ ಭವ್ಯ ಪರಂಪರೆ ಹೊಂದಿರುವ ಈ ಸಂಸ್ಥೆಯನ್ನು ಕನ್ನಡದ ಹಲವು ಮಹನೀಯರು ಅತ್ಯಂತ ಶ್ರದ್ದೆ ಮತ್ತು ನಿಸ್ವಾರ್ಥದಿಂದ ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆ, ಸಂಸ್ಕøತಿ ಮತ್ತು ನಾಡಿಗೆ ಸಮಸ್ಯೆ ಎದುರಾದಾಗ ಪರಿಷತ್ತು ಕನ್ನಡಿಗರ ನೈಜ ಧ್ವನಿಯಾಗಿ ಕೆಲಸ ಮಾಡಿದ ಇತಿಹಾಸವಿದೆ ಎಂದು ಹೇಳಿದರು.
ಇಂತಹ ಘನತೆ ಹೊಂದಿರುವ ಪರಿಷತ್ತಿಗೆ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಜೋಷಿ ಅವರು, ಪರಿಷತ್ತಿನ ಘನತೆಗೆ ವಿರುದ್ಧವಾಗಿ ನಡೆಸುತ್ತಿದ್ದಾರೆ. ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಪಡೆದುಕೊಂಡರೂ ಕನ್ನಡಪರವಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಜೋಷಿ ಅವರು ಮೈತುಂಬಾ ಭ್ರμÁ್ಟಚಾರದ ಕೆಸರು ತುಂಬಿಕೊಂಡಿದ್ದಾರೆ.
ಬೈಲಾ ತಿದ್ದುಪಡಿ, ಆಜೀವ ಸದಸ್ಯತ್ವ ರದ್ದು, ಚುನಾವಣೆ ಮೂಲಕ ಆಯ್ಕೆಗೊಂಡಿರುವ ಜಿಲ್ಲಾಧ್ಯಕ್ಷರ ನಡುವೆ ತಾರತಮ್ಯ ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ತಿದ್ದುಪಡಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸುವ ಹೊಣೆಗಾರಿಕೆ ಪರಿಷತ್ತಿನ ಸದಸ್ಯರು ಮತ್ತು ಕನ್ನಡಿಗರದ್ದಾಗಿದೆ. ಪರಿಷತ್ತಿಗೆ ಕಂಟಕಪ್ರಾಯವಾಗಿರುವ ಜೋಷಿ ಅವರನ್ನು ಕೂಡಲೇ ಕೆಳಗಿಳಿಸಿ ಕನ್ನಡ ಉಳಿಸಿ ಎಂಬ ಘೋಷಣೆಯೊಂದಿಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರತಿರೋಧ ಆರಂಭವಾಗಿದೆ ಎಂದರು. ನಂತರ ಎಡಿಸಿ ಕೆ.ಟಿ.ಶಾಂತಲಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಾಹಿತಿಗಳಾದ ಮೇಟಿಕೆರೆ ಹಿರಿಯಣ್ಣ, ಎನ್.ಎಲ್.ಚನ್ನೇಗೌಡ, ಡಾ. ನಿಂಬೆಹಳ್ಳಿ ಚಂದ್ರಶೇಖರ್, ಹರೀಶ್ ಕಟ್ಟೆಬೆಳಗುಲಿ, ತಮ್ಮಣ್ಣಗೌಡ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್ ಕುಮಾರ್, ಹಿರಿಯ ಪತ್ರಕರ್ತರಾದ ಆರ್.ಪಿ.ವೆಂಕಟೇಶ್ ಮೂರ್ತಿ, ವೆಂಕಟೇಶ್, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಸಿ.ಐ.ಟಿ.ಯು. ಎಂ.ಜಿ. ಪೃಥ್ವಿ, ಅರವಿಂದ್, ದಲಿತ ಹಿರಿಯ ಮುಖಂಡರಾದ ಕೃಷ್ಣದಾಸ್, ಅಂಬುಗ ಮಲ್ಲೇಶ್, ಚೆಲುವನಹಳ್ಳಿ ಶೇಖರಪ್ಪ ಇತರರು ಇದ್ದರು.
