ಹೊಳೆನರಸೀಪುರ: ಪಟ್ಟಣದ ಅಗ್ನಿಶಾಮಕ ಇಲಾಖೆಯ ವತಿಯಿಂದ ಏಪ್ರಿಲ್ 14 ರಿಂದ 20 ರವರೆಗೆ ‘ಅಗ್ನಿಶಾಮಕ ಸೇವಾ ಸಪ್ತಾಹ’ವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಲ್ಲಿ ಬೆಂಕಿ ಅವಘಡಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಗ್ನಿಶಾಮಕ ಅಧಿಕಾರಿ ರಂಗಸ್ವಾಮಿ ವೈ.ಜೆ., “1944ರ ಏಪ್ರಿಲ್ 14ರಂದು ಮುಂಬೈ ಬಂದರಿನ ಹಡಗೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸುಮಾರು 1400 ಟನ್ ಹತ್ತಿ ಬೆಂಕಿಗಾಹುತಿಯಾಗಿತ್ತು. ಈ ವೇಳೆ ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಗಳಲ್ಲಿ 66 ಮಂದಿ ವೀರಮರಣ ಅಪ್ಪಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರಲು ಹಾಗೂ ಅವರ ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಏಪ್ರಿಲ್ 14 ರಿಂದ ಒಂದು ವಾರಗಳ ಕಾಲ ಅಗ್ನಿಶಾಮಕ ಸಪ್ತಾಹವನ್ನು ಆಚರಿಸಲಾಗುತ್ತದೆ,” ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, “ಬೆಂಕಿ ನಮ್ಮ ದೈನಂದಿನ ಜೀವನಕ್ಕೆ ಎಷ್ಟು ಅವಶ್ಯಕವೋ, ಅಷ್ಟೇ ಅಪಾಯಕಾರಿ ಕೂಡ ಹೌದು. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮನೆಗಳಲ್ಲಿ ಗ್ಯಾಸ್ ಬಳಕೆ, ವಿದ್ಯುತ್ ಉಪಕರಣಗಳ ಬಳಕೆ ಹಾಗೂ ಹೊಲ-ಗದ್ದೆಗಳಲ್ಲಿ ಬೆಂಕಿ ಹಾಕುವಾಗ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಬೆಂಕಿ ಅವಘಡಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಎಚ್ ಆರ್ ಪ್ರದೀಪ್ ಕುಮಾರ್ ಸೀನಿಯರ್ ಪ್ಲಟೂನ್ ಕಮಾಂಡರ್. ಗೃಹರಕ್ಷಕ ದಳ, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳಿರುವ ಕರಪತ್ರಗಳನ್ನು ವಿತರಿಸುವ ಮೂಲಕ ಅರಿವು ಮೂಡಿಸಿದರು.
