ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 51 ಕೃತಿಗಳನ್ನು ಪ್ರಕಟಿಸಿರುವ ಡಾ. ಪ್ರಕಾಶ್ ಗ. ಖಾಡೆ ವಿದ್ಯಾರ್ಥಿ ದೆಸೆಯಲ್ಲಿಯೇ 1986ರಲ್ಲಿ ಗೀತ ಚಿಗಿತ ಸಂಪಾದಿತ ಕವನ ಸಂಕಲನದಿಂದ ಇತ್ತೀಚಿನ ಬಾಳುಕನ ಪುರಾಣ ಕಥಾ ಸಂಕಲನದವರಗೂ ದಣಿವರಿಯದೇ ಬರೆಯುತ್ತಿದ್ದಾರೆ. ಇವರು ಮತ್ತು ಶಂಕರ ಬೈಚಬಾಳ ಇರ್ವರೂ ನನಗೆ ಪರಿಚತವಾದದ್ದು 2008ರಲ್ಲಿ ನಡೆದ ಮೈಸೂರು ದಸರಾ ಕವಿಗೋಷ್ಠಿಯಲ್ಲಿ. ಹಿಂದಿನ ರಾತ್ರಿ ನಾವು ಮೂವರು ಒಂದೇ ರೂಮಿನಲ್ಲಿ ಉಳಿದುಕೊಂಡಿದ್ದೆವು. ಮಾತು ಪರಿಚಯ ಸ್ನೇಹಕ್ಕೆ ತಿರುಗಿ ನಾನು ಆಗತಾನೇ (2007) ಪ್ರಕಟವಾಗಿದ್ದ ನನ್ನ ಕಾವೇರಿ ನದಿಯ ದಡದಲ್ಲಿ ಕೃತಿ ನೀಡಿದೆ. ಎಂ.ಎಸ್. ವೆಂಕಟರಾಮಯ ಬರೆದ ಮುನ್ನುಡಿ ಮೇಲೆ ಕಣ್ಣಾಡಿಸಿದರು ಖಾಡೆ.
‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ.. ಎಂದು ಕವಿ ವರ್ಣಿಸಿದ ರಮಣೀಯ ನಿಸರ್ಗ ಸೌಂದರ್ಯದ ಬೀಡಾದ ಕೊಡಗಿನ ಪಶ್ಚಿಮ ಘಟ್ಟ ಭಾಗವಾದ ಬ್ರಹ್ಮಗಿರಿಯ ತಪ್ಪಲಿನಲ್ಲಿ ತಲಕಾವೇರಿ ಎಂಬಲ್ಲಿನ ಬ್ರಹ್ಮಕುಂಡಿಕೆಯಲ್ಲಿ ಚಿಮ್ಮಿ ಉದ್ಭವವಾಗಿ ಮುಂದೆ ಹೊರಳಿ ಹರಿದು ಕರ್ನಾಟಕ ತಮಿಳುನಾಡು ರಾಜ್ಯಗಳಲ್ಲಿನ ಸುಮಾರು 802 ಕಿ.ಮೀ.ದೂರ ಕ್ರಮಿಸಿ ಬಂಗಾಳಕೊಲ್ಲಿ ಸೇರುವ ಕಾವೇರಿ ನದಿಯ ರೋಚಕತೆಯೇ ‘ಕಾವೇರಿ ನದಿಯ ದಡದಲ್ಲಿ. ಲೇಖಕಮಿತ್ರ ಶ್ರೀ ಗೊರೂರು ಅನಂತರಾಜು ಈ ಕೃತಿಯನ್ನು ಅಧ್ಯಯನ ಯೋಗ್ಯ ಕೃತಿಯಷ್ಟೇ ಅಲ್ಲದೇ ಪ್ರವಾಸಿಗರ ಉತ್ತಮ ಕೈಪಿಡಿಯಾಗುವಂತೆ ರಚಿಸುವಲ್ಲಿ ಬಹಳ ಶ್ರಮವಹಿಸಿದ್ದಾರೆ… ಅನಂತರಾಜ್ ಸರ್, ನಾವು ಕವಿಗೋಷ್ಠಿ ಮುಗಿಸಿ ಬೆಳಿಗ್ಗೆ ತಲಕಾವೇರಿಗೆ ಹೋಗಿ ಬರೋಣವೇ ಎಂದು ಅಭಿಲಾಶೆ ವ್ಯಕ್ತಪಡಿಸಿದರು. ಸರಿ ನಾವು ತಲಕಾಡಿಗೆ ಟ್ರಿಪ್ ಹೊರಟೆವು. ಅಲ್ಲಿಯ ರಮ್ಯ ಸೌಂದರ್ಯ ನೋಡಿ ಕವಿಗಳೀರ್ವರು ಖುಷಿಯಾದರು. ಹೋಗ್ತ ಖಾಡೆ ತಮ್ಮ ಕೃಷ್ಣಾ ತೀರದ ಜನಪದ ಒಗಟುಗಳು ಕೃತಿ ಕೊಟ್ಟರು. ಒಗಟುಗಳು ಸಾಹಿತ್ಯಕ ಮೌಲ್ಯವನ್ನು ಒಳಗೊಂಡ ಜನಪದ ಸಾಹಿತ್ಯದ ಶ್ರೇಷ್ಠ ರಚನೆಗಳಾಗಿವೆ. ಭಾವ ಹೆಪ್ಪುಗಟ್ಟಿ ಗೀತೆಯಾಗುವಂತೆ, ಭಾವ ಬುದ್ಧಿಗಳ ರಸಾಯನದಿಂದ ಗಾದೆಯಾಗುವಂತೆ, ಬುದ್ಧಿ ಹರಳಗೊಂಡು ಒಗಟಾಗುತ್ತದೆ. ಒಗಟು ಎಂದರೆ ಜಟಿಲವಾದದ್ದು, ಗೋಜಲು ಗೋಜಲಾದದ್ದು, ಗೂಢವಾದದ್ದು, ಬುದ್ಧಿ ಪ್ರತಿಭೆಗಳ ಸಂಯೋಜಿತ ಸೃಷ್ಟಿಯಾದ ಸೃಷ್ಟಿಯಾದ ಸೌಂದರ್ಯ ಕರ್ಯಕಾರಣ ತರ್ಕ ಶಕ್ತಿಗಳನ್ನೊಳಗೊಂಡ, ಸಿಪ್ಪೆ ಸುಲಿಯುತ್ತಾ ತಿರುಳಿನ ನೆಡೆಗೆ ಸೆಳೆಯುವ ಅರ್ಥಾಪೇಕ್ಷಿಯಾದ ಪದಚಕ್ರವ್ಯೂಹವೇ ಒಗಟು.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಕುರಿತ ಪಿ.ಹೆಚ್.ಡಿ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿರುವ ಡಾ. ಪ್ರಕಾಶ್ ಗ. ಖಾಡೆ ಕೃಷ್ಣ ನದಿ ತೀರದ ಹಳ್ಳಿಗಳಲ್ಲಿ ಹತ್ತಾರು ವರ್ಷ ಸುತ್ತಾಡಿ ಬೀಸುಕಲ್ಲಿನ ಮುಂದೆ ಕುಳಿತು ಹಾಡು ಹೇಳುತ್ತ ಬೆಳಗು ಮುಂಜಾನೆ ಅರ್ಧ ಚೀಲ ಜೋಳ ಬೀಸಿದರೂ ಕಾಳ ಮುಗಿದವ ನಮ್ಮ ಹಾಡು ಮುಗಿಲಿಲ್ಲ ಎಂಬAತೆ ನಾವೆಷ್ಟೇ ಸಂಗ್ರಹಿಸಿದರೂ ಇನ್ನು ಉಳಿದುಕೊಂಡೆ ಇರುವ ಜಾನಪದ ಸಂಪತ್ತಿನ ಒಂದು ಭಾಗವಾಗಿರುವ ಕೃಷ್ಣ ತೀರದ ಜನಪದ ಒಗಟುಗಳು ಕೃತಿಯಲ್ಲಿ 305 ಒಗಟುಗಳನ್ನು 12 ಒಡಗತೆಗಳನ್ನು ಸಂಗ್ರಹಿಸಿದ್ದಾರೆ.ಒಗಟುಗಳು ಸಾಹಿತ್ಯಕ ಮೌಲ್ಯವನ್ನು ಒಳಗೊಂಡ ಜನಪದ ಸಾಹಿತ್ಯದ ಶ್ರೇಷ್ಠ ರಚನೆಗಳಾಗಿವೆ. ಒಗಟು ಪರಿಭಾವಿಸಿದಷ್ಟೂ ಅರ್ಥಪರೆ ಬಿಚ್ಚಿಕೊಳ್ಳುವ ಗುಣ ವಿಶೇಷದಿಂದ ಶ್ರೇಷ್ಠಕಾವ್ಯದ ನಿಲುವಿಗೇರುವ ಅಂಶಗಳನ್ನೂ ಹೊಂದಿವೆ. ಇಲ್ಲಿ ಮುಖ್ಯವಾದ ಸಂಗತಿಯೆAದರೆ ಒಗಟು ರೂಪಕ ಮೂಲವಾದದ್ದು. ಈ ಗುಣದಿಂದಲೇ ಅದು ಧ್ವನಿಪೂರ್ಣವಾಗುತ್ತದೆ. ಧ್ವನಿ ಸಂಕ್ಷಿಪ್ತತೆಗೆ ಸಾಧನವಾದ ಸಾಂಕೇತಿಕತೆಯನ್ನು ಅರಸುತ್ತದೆ. ಹೀಗೆ ಸಾಂಕೇತಿಕತೆಯಲ್ಲಿ ಅಭಿವ್ಯಕ್ತಿಗೊಂದ ಸಂಕ್ಷಿಪ್ತ ಕಾವ್ಯವೇ ಒಗಟು.
‘ ನಾ ತಂದಿನಿ ನಿನ್ನ ನನ್ನನ್ಯಾಕ ನೋಡತಿ ಹೊಳ್ಳೊಳ್ಳಿ.. ಉತ್ತರ ಕರ್ನಾಟಕ ಭಾಷಾ ಸೊಗಡಿನ ಒಗಟಿಗೆ ಉತ್ತರ ಹುಡುಕುತ್ತಾ ಹೊರಟಲ್ಲಿ ಹೊಳೆದಿದ್ದು ‘ಕನ್ನಡಿ’ಯಲ್ಲಿ. ಸ್ವತ: ಕವಿಯಾಗಿ ಪ್ರೀತಿ ಬಟ್ಟಳು ಕವನ ಸಂಕಲನ ಪ್ರಕಟಿಸಿರುವ ಪ್ರಕಾಶ ಗ.ಖಾಡೆ ಅವರ ಈ ಕೃತಿಗೆ ಗಂಗಮ್ಮ ಸೋಮಪ್ಪ ಬೊಮ್ಮಾಯಿ (ಹುಬ್ಬಳಿ) ಪ್ರತಿಷ್ಠಾನವು ಜಾನಪದ ಸಿರಿ ಪ್ರಶಸ್ತಿ ನೀಡಿದೆ. ಹಿರಿ ಹೊಳಿ ಎಂದೇ ಜನಪದದಲ್ಲಿ ರೂಢಿಗತವಾಗಿರುವ ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನಾಡಿ. ಮಹಾರಾಷ್ಟçದ ಸಾತಾರ ಜಿಲ್ಲೆಯ ಮಹಾಬಲೇಶ್ವರದಲ್ಲಿ ಉಗಮಿಸಿ ಕರ್ನಾಟಕ ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಾಪುರ, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳಲ್ಲಿ ಪ್ರವಹಿಸುತ್ತಿರುವ ಕೃಷ್ಣಾ ತೀರದ ಪ್ರದೇಶಗಳಲ್ಲಿ ಜಾನಪದದ ಸಿರಿ ಸೊಬಗು ತುಂಬಿ ತುಳುಕುತ್ತಿದೆ. ಜಾತ್ರೆ ಉತ್ಸವ ಹಬ್ಬ ಹರಿದಿನಗಳಲ್ಲಿ, ಜನರ ಧಾರ್ಮಿಕ ಆಚರಣೆ ನಡೆ ನುಡಿಗಳಲ್ಲಿ ಜಾನಪದದ ಒಡಲು ಬರಿದಾದುದೆ ಇಲ್ಲ. ಒಗಟು ಕೂಡ ಅಷ್ಟೇ. ಅಡ್ಡ ಬಡ್ಡ ಬಿದರ ಸೀಳಿ ಅವರ ಮನಿಕಡ್ಡಿ ಮ್ಯಾಲ ಅಂತರಂಗದ ಗುಡಿ. ಅರಕಟ್ಟಿ, ಮರಕಟ್ಟಿ ಸುತ್ತಲ ಹಳ್ಳಿಕಟ್ಟಿ ಸೂಳಿಭಾವಿ ಕಟ್ಟ ಇದನ್ನ ಒಡದವರಿಗೆ ಬಂಗಾರದ ಕಟ್ಟಿ, ಒಡೆಯಲ್ಲದವರಿಗೆ ಚಪ್ಪಲ ಜೋಡ ಕಟ್ಟಿ.. ಈ ಎರಡೂ ಒಗಟುಗಳಿಗೂ ಉತ್ತರ ‘ತೇರು’, ಊಹೆಯಿಂದ ಬಿಡಿಸಬೇಕಾದ ಹಾಸ್ಯ ವಿಡಂಬನೆ, ಭಾಷೆ ಹಾಗೂ ಸಾಹಿತ್ಯ ಸೌಂದರ್ಯದ ಅಂಶಗಳನ್ನು ರೂಢಿಸಿಕೊಂಡ ಒಗಟು ಎಲ್ಲ ವಯೋಮಾನದಲ್ಲೂ ಉಳಿದುಕೊಂಡು ಬಂದಿವೆ. ಮಕ್ಕಳಿಗೆ ಪ್ರಿಯವಾಗುವ ಒಗಟುಗಳು ಮಾನಸಿಕ ಶೈಸವಾವಸ್ಥೆಯ ನಿಗೂಢತೆಗಳೂ ಹೌದು ವಿವೇಚನೆಯೂ ಹೌದು. ಒಗಟು ಸಂಗ್ರಹದೊAದಿಗೆ ಒಗಟು ಹೇಳಿದವರ ಹೆಸರು ವಿಳಾಸ ನೀಡಿ ಗ್ರಾಮ್ಯ ಪದಗಳಿಗೆ ಅರ್ಥಕೋಶವನ್ನು ಲೇಖಕರು ಕೊಟ್ಟಿದ್ದಾರೆ. ಡಜನ್ ಒಡಗತೆಯಲ್ಲಿ ಹೀಗೊಂದು ಒಂದ ಮುದುಕಿ ಮನಿಗೆ ಒಬ್ಬಾಕಿ ಹಿಂಡಿ ಬೇಡಾಕ ಬಂದ್ಲು. ಆಗ ಮುದುಕಿ ಮನಿಗಿ ಮತ್ತೊಬ್ಬ ಹಾಲು ಬೇಡಾಕ ಬಂದ. ಇಬ್ಬರಿಗೂ ಒಂದ ಉತ್ತರ.. ಹಿಂಡಿಲ್ಲಾ. ಒಗಟು ಮತ್ತು ಒಡತೆಗಳು ಟೈಂಪಾಸ್ ಕಡ್ಲೆಕಾಯಿಯಂತೆ ಪ್ರಿಯವಾಗುತ್ತವೆ.

ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3ನೇ ಕ್ರಾಸ್, ಹಾಸನ-573201.
