ದೇಶ ಕೋಶ ದಾಸವಾಳ ಕವಿ ಎಲ್.ಎನ್.ಮುಕುಂದರಾಜ್ ಅವರ ಮೊದಲ ಕವನ ಸಂಕಲನ. ಈ ಸಂಕಲನದ ಮೊದಲ ಕವಿತೆ ಹದ್ದು ಮತ್ತು ಜೀಮೂತ. ಈ ಕಾವ್ಯದ ವಸ್ತು ಸಂಸ್ಕೃತದಲ್ಲಿ ಸುಪ್ರಸಿದ್ಧವಾದ ಶ್ರೀಹರ್ಷನ ನಾಗನಂದ ನಾಟಕದ್ದು. ಪುರಾಣ ಕೇಂದ್ರಿತ ಪ್ರಜ್ಞೆಯನ್ನು ವರ್ತಮಾನದ ಸ್ಥಿತಿಗೆ ತರುವ ಕವಿ ಈ ವಸ್ತುವನ್ನು ನಮ್ಮ ಸಮಕಾಲೀನತೆಯಲ್ಲಿ ಇರಿಸಿ ಈ ಹೊತ್ತಿನ ಹದ್ದುಗಳು ನಮ್ಮ ಪರಿಸರದ ಜೀಮೂತವಾಹರಂಥ ಮುಗ್ಧರನ್ನು ಕುಕ್ಕಿ ತಿನ್ನುವ ಕರಾಳತೆಯನ್ನು ಚಿತ್ರಿಸಲು ಬಳಸುತ್ತಾರೆ.
ರಕ್ಕಸ ಕೊಕ್ಕಿನ ಹದ್ದು: ಬೆಳೆದು
ಬಲಗೊಂಡು ನಿಂತಿದೆ ಎದ್ದು ಸಡ್ಡು ಹೊಡೆದು
ರೆಕ್ಕೆಗಳು ಮುಗಿಲಗಲ ಚಾಚಿ ಭಯ ಹುಟ್ಟಿಸುತ್ತವೆ
ಕವಿತೆಯಲ್ಲಿನ ರಕ್ಕಸ ಕೊಕ್ಕಿನ ಹದ್ದುಗಳು ನಮ್ಮ ಸಮಾಜದಲ್ಲಿ ಮುಕ್ಕಿ ತಿನ್ನುವ ರಣಹದ್ದುಗಳು. ತಮ್ಮ ಸ್ವಾರ್ಥಕ್ಕಾಗಿ ದೀನದಲಿತರನ್ನು, ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕ್ರಮದಲ್ಲಿ ಜೀಮೂತವಾಹನ ಪುನರ್ ಸೃಷ್ಟಿಸಿಗೊಂಡಿದ್ದಾನೆ. ಜೀಮೂತವಾಹನ ಒಬ್ಬ ವಿದ್ಯಾಧರ. ಆತ ಮಲಯವತಿಯೆಂಬ ರಾಜಕುಮಾರಿಯನ್ನು ಮದುವೆಯಾಗುತ್ತಾನೆ. ಒಮ್ಮೆ ಮಲಯವತಿಯ ಅಣ್ಣನಾದ ಮಿತ್ರಾವಸುವಿನೊಡನೆ ಸಮುದ್ರತೀರದಲ್ಲಿ ವಿಹರಿಸುತ್ತಿರುವಾಗ ಪರ್ವತೋಪಮವಾಗಿ ಬಿದ್ದಿದ್ದ ಬೆಳ್ಳನೆಯ ಮೂಳೆಗಳ ರಾಶಿಯನ್ನು ಕಾಣುತ್ತಾನೆ. ಅವು ಸರದಿಯ ಮೇರೆಗೆ ಒಪ್ಪಂದದ ಪ್ರಕಾರ ದಿನವೂ ಆಹಾರವಾದ ಅಸಂಖ್ಯ ನಾಗಗಳ ಎಲುಬುಗಳು. ಈ ವಿಚಾರ ತಿಳಿದು ದು:ಖಿತನಾದ ಜೀಮೂತವಾಹನ ಒಬ್ಬ ನಾಗನನ್ನಾದರೂ ಬದುಕಿಸಲು ತನ್ನನ್ನು ತಾನು ಬಲಿಕೊಟ್ಟುಕೊಳ್ಳುವುದು ಸಾಧ್ಯವಾಗುವುದಾದರೆ ತನ್ನ ಬದುಕು ಸಾರ್ಥಕ ಎಂದು ಭಾವಿಸುತ್ತಾನೆ. ನಾಗನ ತಾಯಿಯ ಅಳಲನ್ನು ಕಣ್ಣಾರೆ ಕಂಡು ಶಂಖಚೂಡನ ಬದಲು ರಕ್ತ ವಸ್ತçಗಳನ್ನು ಹೊದ್ದುಕೊಂಡು ವಧ್ಯಶಿಲೆಯ ಮೇಲೆ ಕೂತು ಎರಗಿ ಬಂದ ಗರುಡನಿಗೆ ತನ್ನನ್ನು ಆಹಾರವಾಗಿ ಒಪ್ಪಿಸಿಕೊಳ್ಳುತ್ತಾನೆ. ಜೀಮೂತವಾಹನನ ತ್ಯಾಗದ ಮಹತ್ತಿನಿಂದ ದಿಗ್ಬçಮೆಗೊಂಡ ಗರುಡನಿಗೆ ಪಶ್ಚಾತ್ತಾಪದಿಂದ ಮನ:ಪರಿವರ್ತನೆಯಾಗುತ್ತದೆ. ಗರುಡನೇ ದೇವಲೋಕದಿಂದ ತಂದ ಅಮೃತದ ಧಾರೆಯಿಂದ ಮರಣೋನ್ಮುಖನಾದ ಜೀಮೂತವಾಹನ ಬದುಕಿ ಉಳಿಯುತ್ತಾನೆ. ಅಷ್ಟೇ ಅಲ್ಲ ಪರ್ವತಾಕಾರದ ಮೂಳೆಯ ರಾಶಿಯ ಮೇಲೂ ಅಮೃತಸಿಂಚನವಾಗಿ ಆವರೆಗೂ ಮೃತವಾದ ನಾಗ ಸಂತತಿಯೂ ಬದುಕುಳಿಯುತ್ತದೆ.
ಗರುಡನಿಗೆ ಸರದಿಯ ಪ್ರಕಾರ ಆಹಾರವಾಗಬೇಕಿದ್ದ ಶಂಖಚೂಡನೆಂಬ ನಾಗನನ್ನು ಉಳಿಸಲು ತಾನೇ ಗರುಡನಿಗೆ ಆಹಾರವಾಗುವ ಜೀಮೂತವಾಹನನ ತ್ಯಾಗಶೀಲತೆ ಉದಾತ್ತವಾದದ್ದು. ಆತನ ತ್ಯಾಗ ಪುರಾಣ ಪ್ರಜ್ಞೆಯೊಳಗೆ ಮೌಲ್ಯಾಧಾರಿತವಾದದ್ದೇ ಆಗಿದೆ ಆದರೆ
ಸತ್ತು ಬಿದ್ದಿರುವ, ಬಿದ್ದು ಬೆಟ್ಟವಾಗಿರುವ
ಸರ್ಪಗಳ ಮೂಳೆರಾಶಿ ಮೈ ಬೆವರೊಡೆಯುತ್ತದೆ
ತ್ಯಾಗ ತತ್ತರಿಸಿ ದು:ಖದ ರಾಗ ಒತ್ತರಿಸುತ್ತದೆ.

ವರ್ತಮಾನದಲ್ಲಿ ಜೀಮೂತವಾಹನನ ತ್ಯಾಗದ ಮತ್ತು ಧೀರೋದಾತ್ತತೆಯ ನಿಲುವುಗಳು ಎಷ್ಟೊಂದು ಪೊಳ್ಳಾಗಿಬಿಡುತ್ತವೆ ಎಂಬ ವಾಸ್ತವವನ್ನು ತೆರೆದಿಡಲು ಪ್ರಯತ್ನಿಸುತ್ತಾರೆ.
ತ್ಯಾಗಕ್ಕಾಗಿ ಜೀವ ತೆರಲು ಬಂದ ಜೀಮೂತ
ಕುಕ್ಕಿ ತಿನ್ನುವುದೇ ಉದ್ಯೋಗವಾದ ಹದ್ದು
ಇಬ್ಬರಲ್ಲಿ ಯಾರು ಹೆಚ್ಚು? ನಿಲ್ಲುತ್ತದೆ ಪ್ರಶ್ನೆ ಬೆಚ್ಚಿ
ಕೊನೆಗೆ ಕೊಕ್ಕುಗಳು ಮಸೆಯುತ್ತವೆ ತಮ್ಮನ್ನು ತಾವೆ ಗೆದ್ದು..
ತಮ್ಮ ಕವಿತೆಯಲ್ಲಿ ಕ್ರರ್ಯ ಮತ್ತು ಹಿಂಸೆಗಳ ಜಗತ್ತಿನಲ್ಲಿ ಕುಕ್ಕಿ ತಿನ್ನುವುದೇ ಉದ್ಯೋಗವಾಗಿರುವ ರಣಹದ್ದುಗಳ ಕೊಕ್ಕುಗಳ ಭೀಕರತೆಯನ್ನು ಬಯಲು ಮಾಡುತ್ತಲೇ ಜೀಮೂತವಾಹನರಂಥ ಮುಗ್ಧರನ್ನು ಎಚ್ಚರಿಸಲು ಪ್ರಯತ್ನಿಸುತ್ತಾರೆ.
1985ರಲ್ಲಿ ತಾರುಣ್ಯ ಎಂಬ ಕವನ ಸಂಕಲನವನ್ನು ಮುಕುಂದರಾಜ್ ಸಂಪಾದಿಸಿ ಪ್ರಕಟಿಸಿದ್ದರು. ಇದರಲ್ಲಿ ನನ್ನದೊಂದು (ಗೊರೂರು ಅನಂತರಾಜು) ಕವಿತೆಯೂ ಸೇರಿದೆ. ಮುಖಪುಟದ ಚಿತ್ರ ಒಂದು ಹದ್ದು ಹೆಣ್ಣಿನ ಬೆನ್ನಿನ ಮೇಲೆ ಕುಳಿತು ಕುಕ್ಕಿ ತಿನ್ನುತ್ತಿದೆ. ಆಗ ಪತ್ರದಲ್ಲೇ ಪರಿಚಯವಾಗಿದ್ದ ಮುಕುಂದರಾಜ್ 2008ರಲ್ಲಿ ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಭೇಟಿಯಾದೆವು. ಅಂದು ನಾನು ಹದ್ದು ಬರುತ್ತಿದೆ ಎಚ್ಚರ ಕವಿತೆ ವಾಚಿಸಿದ್ದೆ.
ಹದ್ದು ಬರುತ್ತಿದೆ ಎದ್ದು ಓಡುವಿರಾ ಇದ್ದು ಹೋರಾಡುವಿರಾ
ಹತ್ತು ತಲೆಯ ರಾವಣನ ಹುತ್ತ ಬೆಳೆಯುತ್ತಿದೆ
ಹುತ್ತದೊಳಗಿನ ವಿಷಸರ್ಪಗಳು ಸೀತೆಯನ್ನು ಮುತ್ತಿಕ್ಕುತ್ತಿವೆ
ದಶರಥನ ಪುತ್ರಕಾಮೇಷ್ಠಿ ಯಾಗಕ್ಕೆ
ಹವಿಸ್ಸುಗಳು ಸಿದ್ಧಗೊಳ್ಳುತ್ತಿವೆ ಇಂದಿಗೂ ಎಂದೆಂದಿಗೂ..

ದಸರಾ ಕವಿಗೋಷ್ಠಿ ಹಲವು ಗಟ್ಟಿ ಕೆಲವು ಜೊಳ್ಳು ಎಂಬ ಶೀರ್ಷಿಕೆಯಡಿ ಮಾರನೇ ದಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ ಹೀಗೆ:
ಹದ್ದು ಹಾರುತ್ತಿದೆ ಎಚ್ಚರ ಎಂಬ ಕವನದ ಮೂಲಕ ಹೆಚ್ಚುತ್ತಿರುವ ಮತಾಂಧತೆ, ಶಕುನಿ ಸಂತಾನ, ಮದಿರೆ ಮಾನಿನಿಯರ ಹಾವಳಿ ಇರುವ ಸಮಾಜದ ಬಗ್ಗೆ ಗಮನ ಸೆಳೆದ ಗೊರೂರು ಅನಂತರಾಜು ಪ್ರತಿಶತ ತ್ಯಾಗಿಯಾದರೆ ಹರಿಶ್ಚಂದ್ರನ ಸ್ಮಶಾನವೇ ಗತಿ ಎಂಬ ಅಪ್ರಿಯ ಸತ್ಯವನ್ನು ನುಡಿದರು. ಬೆಂಗಳೂರಿನ ಎಲ್.ಎನ್.ಮುಕುಂದರಾಜ್ ಅವರು ವಾಚಿಸಿದ ವಿಲೋಮ ಚರಿತೆ ಕವನ ಕಾವ್ಯಾತ್ಮಕತೆ, ವಸ್ತು, ಭಾಷೆ ಪರಿಣಾಮದಲ್ಲಿ ಶ್ರೀಮಂತವಾಗಿತ್ತು. ಚರಿತೆಯನ್ನು ಒಮ್ಮೆಗೆ ದಮ್ಮು ಹಿಡಿದು ಊರು ಹೊಡೆದ ಗಿಳಿಗಳು ಈಗ ಸುಮ್ಮನಾದವು.. ಎಂದು ಆರಂಭವಾದ ಪದ್ಯ ಪುರೋಹಿತಶಾಹಿ ಮತ್ತು ಜಾತಿ ವ್ಯವಸ್ಥೆ ಸೃಷ್ಟಿತ ಅಪಸವ್ಯಗಳ ಮೇಲೆ ಬೆಳಕು ಚೆಲ್ಲಿತು. ಧರ್ಮ ವಂಚನೆಯಾಗಿತ್ತು. ನ್ಯಾಯ ನೀತಿ ಬಲಿಷ್ಟರ ಮುಷ್ಟಿಯೊಳಗಿತ್ತು. ಬುದ್ಧ ಬಸವ ಗಾಂಧಿ ವಿಷಾದದ ನಗೆ ನಕ್ಕರು. ಕುವೆಂಪು ತಮ್ಮ ಲೇಖನಿಯನ್ನು ಕೆಳಗಿಟ್ಟರು.
ಇತ್ತೀಚಿಗೆ ಬೆಂಗಳೂರಿನ ನಾಗರಬಾವಿಯ ಮುಕುಂದರಾಜ್ ಮನೆಗೆ ನಾನು ದಾರಿ ಯಾವುದಯ್ಯ ವೈಕುಂಠಕ್ಕೆ ಚಲನಚಿತ್ರ ನಿರ್ದೇಶಕ ಸಿದ್ಧು ಪೂರ್ಣಚಂದ್ರ, ಅಂಗೈಲಿ ಅಕ್ಷರ ಚಿತ್ರ ನಿರ್ಮಾಪಕ ಜ್ಞಾನೇಶ್ ಭೇಟಿ ಇತ್ತೆವು. ಮುಕುಂದರಾಜ್ ಕೂಡ ಕಾಡ ಹಾದಿಯ ಹೂಗಳು ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಗ್ರಾಮೀಣ ಶಾಲೆಗಳ ಅಳಿವು ಉಳಿವುಗಳ ಮೇಲೆ ಕ್ಷಕಿರಣ ಬೀರುತ್ತವೆ. ಕನ್ನಡ ಪ್ರೀತಿಯನ್ನು ಸೃಷ್ಟಿಸುವ ಕಾಡಹಾದಿಯ ಹೂಗಳು ಮುದ್ದು ತೀರ್ಥಹಳ್ಳಿ ಎಂಬ ಬಾಲಕಿ 9ನೇ ತರಗತಿಯಲ್ಲಿದ್ದಾಗ ಬರೆದ ಕಾದಂಬರಿ. ಮಾತೃಭಾಷಾ ಶಿಕ್ಷಣದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಾಗೂ ಖಾಸಗಿ ಶಾಲೆಗಳ ಇಂಗ್ಲೀಷ್ ವ್ಯಾಪಾರೀಕರಣ ಮತ್ತು ಸರ್ಕಾರಿ ಶಾಲೆಗಳ ಮೇಲಿನ ಪೋಷಕರ ಕಡೆಗಣನೆಯ ಸೂಕ್ಷ್ಮಗಳು ಈ ಚಿತ್ರದಲ್ಲಿವೆ. ಜ್ಞಾನೇಶ್ ತಾವು ಒಂದು ಕ್ಯಾಬ್ ಬುಕ್ ಮಾಡಿ ಆ ಕಾರಿನ ಚಾಲಕ ಹೇಳಿದ ಚಿತ್ರಕಥೆಯನ್ನು ಅಂಗೈಲಿ ಅಕ್ಷರ ಸಿನಿಮಾ ಮಾಡಿ ಕಳೆದುಕೊಂಡವರು. ಇನ್ನೂ ಸಿದ್ದು ಸಿನಿಮಾ ಯುದ್ಧರಂಗದಲ್ಲಿ ಗೆದ್ದವರು. ಮೂವರು ಸಿನಿರಂಗದವರ ಜೊತೆಗೆ ನಾನೂ ಸೇರಿ ಸಿನಿಪ್ರಪಂಚದ ಒಂದು ರೀಲ್ ಸುತ್ತಿದೆವು.
ಗೊರೂರು ಅನಂತರಾಜು, ಹಾಸನ.
ಮೊ:9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
3ನೇ ಕ್ರಾಸ್, ಹಾಸನ-573201.
