ಹಾಸನ, ಜೂನ್ 30: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಹಾಸನ ಜಿಲ್ಲಾ ಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ವಿಶ್ವಾಸ್ ಡಿ. ಗೌಡ ಅವರ ನಿವಾಸದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಕುಶಾಲ ಬರಗೂರು, ಪುಸ್ತಕಗಳು ವ್ಯಕ್ತಿತ್ವ ವಿಕಸನದ ಭದ್ರ ಬುನಾದಿಯಾಗಿದ್ದು, ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ವಿವಿಧ ಯೋಜನೆಗಳು ಹಾಗೂ ಓದುವ ಸಂಸ್ಕೃತಿಯ ಮಹತ್ವವನ್ನು ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಹಾಗೂ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಸಾಹಿತಿ ವಿಶ್ವಾಸ್ ಡಿ. ಗೌಡ ಅವರ ಮನೆಯ ಗ್ರಂಥಾಲಯ ಸಮಾಜಕ್ಕೆ ಮಾದರಿಯಾಗಿದೆ. ಅವರ ಸಾಹಿತ್ಯ ಕೃತಿಗಳು ಜನಮನ ಸೆಳೆದಿದ್ದು, ಪ್ರತಿಯೊಂದು ಮನೆಯಲ್ಲೂ ಇಂತಹ ಗ್ರಂಥಾಲಯಗಳು ನಿರ್ಮಾಣವಾಗಬೇಕೆಂಬುದು ಕನ್ನಡ ಪುಸ್ತಕ ಪ್ರಾಧಿಕಾರದ ಆಶಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಲೋ ಹಾಸನ್ ಪತ್ರಿಕೆಯ ಸಂಪಾದಕ ರವಿ ನಾಕಲಗೋಡು ಮಾತನಾಡಿ, ಹಾಸನ ಜಿಲ್ಲೆಯ ಅನೇಕ ಸಾಹಿತಿಗಳು ಮೂರು ದಶಕಗಳಲ್ಲಿ ಗಳಿಸಿರುವ ಸಾಹಿತ್ಯಿಕ ಗುರುತನ್ನು ಸಾಹಿತಿ ವಿಶ್ವಾಸ್ ಡಿ. ಗೌಡ ಅವರು ಕೇವಲ ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲೇ ತಮ್ಮ ನಿರಂತರ ಬರವಣಿಗೆ, ಪುಸ್ತಕ ಪ್ರಕಟಣೆ ಹಾಗೂ ಸಾಹಿತ್ಯ ಚಟುವಟಿಕೆಗಳ ಮೂಲಕ ಸಾಧಿಸಿರುವುದು ವಿಶೇಷವಾಗಿದೆ. ಅವರ ಬರಹಗಳು ಸಮಾಜಮುಖಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಚಿನ್ನೇನಹಳ್ಳಿ ಸ್ವಾಮಿ ಅವರು ವಿಶ್ವಾಸ್ ಡಿ. ಗೌಡ ಅವರ ಇತ್ತೀಚಿನ ಕೃತಿ ‘ವರ್ಷವಿಡಿ ಶ್ರಾವಣ’ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿ, ಮಹಿಳೆಯರ ಮನೋಭಾವ, ಕುಟುಂಬ ಸಂಬಂಧಗಳು, ಮಕ್ಕಳ ಮನಸ್ಥಿತಿ, ರೈತರ ಬದುಕಿನ ಸಂಕಷ್ಟಗಳು ಹಾಗೂ ಸಮಾಜದ ಸೂಕ್ಷ್ಮ ವಿಚಾರಗಳನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿರುವುದು ಅವರ ಬರವಣಿಗೆಯ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಸುಂದರೇಶ್ ಡಿ. ಉಡುವಾರೆ, ಡಾ. ಬರಾಳು ಶಿವರಾಮ, ಪರಮೇಶ್ ಬಿ. (ಅರಸೀಕೆರೆ) ಹಾಗೂ ಚಿನ್ನೇನಹಳ್ಳಿ ಸ್ವಾಮಿ ಅವರಿಗೆ ಡಾ. ಕುಶಾಲ ಬರಗೂರು ಅವರು ನೇಮಕಾತಿ ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ವಿಶ್ವಾಸ್ ಡಿ. ಗೌಡ ಹಾಗೂ ಅವರ ತಂದೆ ಡಿ.ಟಿ. ದೇವರಾಜೇಗೌಡ ಮತ್ತು ತಾಯಿ ಕೆ.ಎನ್. ನಾಗರತ್ನ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ರತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಮತಾ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀಶ, ವಿಶ್ವಾಸ್ ಡಿ. ಗೌಡ ಅವರ ಕುಟುಂಬದ ಸದಸ್ಯರು, ಸಾಹಿತ್ಯಾಸಕ್ತರು, ಸ್ನೇಹಿತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
