ಕೆ.ಆರ್.ಪೇಟೆ,ಡಿ.28: ತಾಲ್ಲೂಕು ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರ ಸಂಘದ 2026ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಂಘದ ಅಧ್ಯಕ್ಷ ಸಾರಂಗಿ ನಾಗಣ್ಣ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ನಾಗಣ್ಣ ದಿನದರ್ಶಿಕೆಗಳು ಮನುಷ್ಯನ ಜ್ಞಾನದ ಮೂಲವೆಂದು ಕರೆಯಲಾಗುತ್ತದೆ. ಕಚೇರಿಗಳು, ನ್ಯಾಯಾಲಯಗಳಲ್ಲಿ ಕ್ಯಾಲೆಂಡರ್ ಇಲ್ಲದೆ ಯಾವುದೇ ಕೆಲಸ ನಿರ್ವಹಣೆ ಸಾಧ್ಯವೇ ಆಗುವುದಿಲ್ಲ. ಪ್ರತಿಯೊಬ್ಬರಿಗೂ ಸಮಯ ನಿರ್ವಹಣೆಗೆ ಕ್ಯಾಲೆಂಡರ್ ಅಗತ್ಯವಾಗಿದೆ. ಮನುಷ್ಯನಿಗೆ ಪ್ರತಿ ಸೆಕೆಂಡ್, ಪ್ರತಿ ನಿಮಿಷ, ಪ್ರತಿ ದಿನ ಕೂಡ ಅಮೂಲ್ಯವಾದ ಸಮಯವಾಗಿದೆ. ಯಾವ ಸಮಯದಲ್ಲಿ ಏನು ಮಾಡಬೇಕು ಎಂಬ ಕಾರ್ಯಕ್ರಮಗಳನ್ನು ಯೋಜಿಸಲು ಕ್ಯಾಲೆಂಡರ್ ಹೆಚ್ಚು ಸಹಕಾರಿಯಾಗುತ್ತದೆ.

ಕ್ಯಾಲೆಂಡರ್ ಅನ್ನು ಹಿಂದೂ ಸಂಪ್ರದಾಯದ ಪ್ರಕಾರ ಸೃಜಿಸಲಾಗುತ್ತದೆ. ವಾರಗಳು, ಬ್ಯಾಂಕ್ ರಜಾದಿನಗಳು, ಸರ್ಕಾರಿ ರಜಾ ದಿನಗಳು, ಗಣ್ಯರ ಜಯಂತಿಗಳು, ಹಬ್ಬ-ಹರಿದಿನಗಳು, ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬಗಳ ಬಗ್ಗೆ ನಿಖರ ಮಾಹಿತಿಯನ್ನು ಒಳಗೊಂಡ ಸಮಗ್ರ ಮಾಹಿತಿ ಕಣಜವನ್ನು ನಾವು ಕ್ಯಾಲೆಂಡರ್ ಎಂದು ಕರೆಯುತ್ತೇವೆ.

ಇಂದು ಕ್ಯಾಲೆಂಡರ್ ಇಲ್ಲದ ಮನೆ ಸಿಗುವುದೇ ಇಲ್ಲ. ಎಲ್ಲರ ಮನೆಯ ಗೋಡೆಯಲ್ಲಿ ಏನಿಲ್ಲದಿದ್ದರೂ ಕ್ಯಾಲೆಂಡರ್ ಮಾತ್ರ ಇದ್ದೇ ಇರುತ್ತದೆ. ಕ್ಯಾಲೆಂಡರ್ ಇಲ್ಲದಿದ್ದರೆ ಮನೆಯಲ್ಲಿ ಯಾವುದೇ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಕ್ಯಾಲೆಂಡರ್ ಮನುಷ್ಯನ ಜೀವನದಲ್ಲಿ ಅತೀ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಹಾಗಾಗಿ ನಮ್ಮ ಸಂಘವು ಆರಂಭವಾದಾಗಿನಿಂದಲೂ ಪ್ರತಿ ವರ್ಷವೂ ಸಂಘದ ವತಿಯಿಂದ ಕ್ಯಾಲೆಂಡರ್ ಹೊರತಂದು ಸಂಘದ ಎಲ್ಲಾ ಸದಸ್ಯರಿಗೂ ಉಚಿತವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಸಾರಂಗಿ ನಾಗಣ್ಣ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್.ಕೆ.ರಾಮಯ್ಯ, ನಿರ್ದೇಶಕರಾದ ಹಾದನೂರು ಮಂಜುಶೆಟ್ಟಿ, ಪವನ್ಕುಮಾರ್, ಚಿಕ್ಕಳಲೆ ಪ್ರಮೋದ್, ಕೊರಟೀಕೆರೆ ಮಂಜು, ಸಿಂಧಘಟ್ಟ ಸೋಮಶೇಖರ್, ಕೆ.ಆರ್.ಪೇಟೆ ವಿಶ್ವನಾಥ್, ರವಿ, ದೇವಮ್ಮ, ಶೋಭ, ಸಂಘದ ಕಾರ್ಯನಿರ್ವಾಹಣಾಧಿಕಾರಿ ಸರೋಜ ಮತ್ತು ಶಿಲ್ಪ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
