ಕೆ.ಆರ್.ಪೇಟೆ: ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನವಾದ ಯೋಜನೆಗಳಾಗಿವೆ. ಬಡ ಜನರ ನೆಮ್ಮದಿಯ ಜೀವನಕ್ಕೆ ದಾರಿಯಾಗಿವೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಿಎಂ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರವು 2023ರಲ್ಲಿ ಅನುಷ್ಠಾನಕ್ಕೆ ತಂದ ಗ್ಯಾರಂಟಿ ಯೋಜನೆಗಳು ಬಡವರಿಗೆ ನೆಮ್ಮದಿಯ ಜೀವನಕ್ಕೆ ಕಾರಣವಾಗಿವೆ. ಐದು ಯೋಜನೆಗಳು ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅವಧಿಯಲ್ಲಿಯೂ ಯತಾವತ್ ಮುಂದುವರೆಯುತ್ತವೆ ಎಂದು ಎ.ಬಿ.ಕುಮಾರ್ ತಿಳಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಪೂರ್ವದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಬಡವರ ಹಿತದೃಷ್ಠಿಯನ್ನಿಟ್ಟುಕೊಂಡು ಘೋಷಣೆ ಮಾಡಿದರು. ಇದರ ಪರಿಣಾಮ 135ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತಿದ್ದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಮ್ಮದು ಬಡವರ ಪರ ಸರ್ಕಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.
ಆದರೆ ವಿರೋಧ ಪಕ್ಷಗಳು ನಮ್ಮ ಯೋಜನೆಗಳನ್ನು ನಿಲ್ಲಿಸಿಬಿಡುತ್ತಾರೆ ಎಂದು ಆರೋಪ ಮಾಡುತ್ತಿವೆ. ಆದರೆ ಎಂದಿಗೂ ಟೀಕಿಸುತ್ತವೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅವಧಿಯಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯತಾವಥ್ ಮುಂದುವರೆಯುತ್ತವೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ ಶಕ್ತಿ, ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿವೆ. ಗೃಹಜ್ಯೋತಿ ಯೋಜನೆಯಿಂದ ಅದೆಷ್ಟೋ ಬಡ ಕುಟುಂಬಗಳು ತಮ್ಮ ಮನೆಯ ವಿದ್ಯುತ್ ಪಾವತಿಸಲು ಪರದಾಡುತ್ತಿದ್ದವು. ಈಗ ವಿದ್ಯುತ್ ಬಿಲ್ ಪಾವತಿಸುವ ಪ್ರಮೇಯವಿಲ್ಲದೇ ನೆಮ್ಮದಿಯಿಂದ ಮನೆಯಲ್ಲಿ ವಾಸ ಮಾಡುತ್ತಿವೆ. ತಿಂಗಳಿಗೊಮ್ಮೆ ಅನ್ನಭಾಗ್ಯ ಯೋಜನೆ ಮೂಲಕ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಬಡವರು ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಿ ನೆಮ್ಮದಿಯಿಂದ ಮಲಗುವಂತೆ ಮಾಡಿದೆ. ನಿರುದ್ಯೋಗಿಗಳು ಉದ್ಯೋಗ ಸಿಗುವತನಕ ನಿರುದ್ಯೋಗ ಭತ್ಯೆ ಪಡೆದು ಉದ್ಯೋಗ ಹುಡುಕಿ, ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಎ.ಬಿ.ಕುಮಾರ್ ತಿಳಿಸಿದರು.
ಸಭೆಯಲ್ಲಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಪದ್ಮ, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಡಿಪೋ ಟ್ರಾಪಿಕ್ ಇನ್ಸ್ಪೆಕ್ಟರ್ ಗವಿಸಿದ್ದಪ್ಪ ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಲೆಕ್ಕಾಧಿಕಾರಿ ಶಂಕರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಮೆಣಸ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಕನಕದಾಸನಗರ ಶಿವಮ್ಮ, ಬೊಮ್ಮೇನಹಳ್ಳಿ ಲತಾ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
