ರಾಮನಾಥಪುರ : ಪಟ್ಟಣದಲ್ಲಿ ಸುಸಜ್ಜಿತ ಕಟ್ಟಡ ಹೊಂದಿರುವ ಸಾರಿಗೆ ಬಸ್ ನಿಲ್ದಾಣವಿದ್ದರೂ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿತ್ಯವೂ 250ಕ್ಕೂ ಹೆಚ್ಚು ಸಾರಿಗೆ ಬಸ್ಗಳು ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಬಸ್ಗಳ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ.
ಹಾಸನ, ಮೈಸೂರು, ಪಿರಿಯಾಪಟ್ಟಣ, ಸಾಲಿಗ್ರಾಮ, ಬೆಂಗಳೂರು, ಮಡಿಕೇರಿ, ಸೋಮವಾರಪೇಟೆ, ಹುಣಸೂರು ಸೇರಿದಂತೆ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ಇಲ್ಲಿಂದ ಬಸ್ಗಳು ಸಂಚರಿಸುತ್ತಿವೆ. ಆದರೆ ಏಕಕಾಲದಲ್ಲಿ ಕೇವಲ 5ರಿಂದ 7 ಬಸ್ಗಳು ಮಾತ್ರ ನಿಲುಗಡೆ ಮಾಡಲು ಅವಕಾಶವಿರುವುದು ಸಮಸ್ಯೆಗೆ ಕಾರಣವಾಗಿದೆ. ಬಸ್ ನಿಲ್ದಾಣದಿಂದ ಸುಮಾರು 300 ಮೀಟರ್ ದೂರದಲ್ಲಿ ಬಸ್ ಘಟಕವಿದ್ದರೂ ಜಾಗದ ಕೊರತೆಯಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ರಕ್ಷಣಾ ವ್ಯವಸ್ಥೆಯ ಕೊರತೆ ಎದುರಾಗಿದೆ. ರಾಮನಾಥಪುರ ಹೋಬಳಿ ಕೇಂದ್ರವಾಗಿರುವುದರಿಂದ ನಿತ್ಯವೂ ಸಾವಿರಾರು ಜನರು ಇಲ್ಲಿ ಸಂಚಾರ ಮಾಡುತ್ತಾರೆ. ಬಸ್ ನಿಲ್ದಾಣದ ಸಮೀಪ ಗ್ರಾಮ ಪಂಚಾಯಿತಿ ಕಚೇರಿ, ನಾಡ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕಿಯರ ಪದವಿಪೂರ್ವ ಕಾಲೇಜು ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚಾರ ಮಾಡುತ್ತಿದ್ದರೂ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಣನೂರು ಬಸ್ ನಿಲ್ದಾಣದಲ್ಲೂ ಸಮಸ್ಯೆಗಳ ಸರಮಾಲೆ
ಕೊಣನೂರು ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಮೂಲಸೌಕರ್ಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾವೇರಿ ನದಿಗೆ ನಿರ್ಮಿಸಲಾದ ತೂಗು ಸೇತುವೆ ಸಮೀಪದಲ್ಲಿರುವ ಈ ನಿಲ್ದಾಣದಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತವೆ. ಏಕಕಾಲದಲ್ಲಿ 15ಕ್ಕೂ ಹೆಚ್ಚು ಬಸ್ಗಳು ನಿಲ್ಲಬಹುದಾದ ವ್ಯವಸ್ಥೆ ಇದ್ದರೂ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಿಸಿಲ್ಲ. ಇದರಿಂದ ಖಾಸಗಿ ವಾಹನಗಳು ನೇರವಾಗಿ ನಿಲ್ದಾಣ ಪ್ರವೇಶಿಸಿ ಸಂಚಾರ ಅಸ್ತವ್ಯಸ್ತಗೊಳಿಸುತ್ತಿವೆ.
ಹಳೆಯ ಶೌಚಾಲಯ ಕಟ್ಟಡ ಅವಸಾನದ ಅಂಚಿನಲ್ಲಿದ್ದು, ಹೊಸದಾಗಿ ಶೌಚಾಲಯ ನಿರ್ಮಿಸದಿರುವುದು ಪ್ರಯಾಣಿಕರ ಸಂಕಷ್ಟ ಹೆಚ್ಚಿಸಿದೆ. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ದುರ್ವಾಸನೆ ವ್ಯಾಪಿಸಿದ್ದು, ಜನರು ಅನಿವಾರ್ಯವಾಗಿ ಅದನ್ನೇ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಟರ್ಲೈಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕೆಎಸ್ಆರ್ಟಿಸಿ ಸಹಯೋಗದಲ್ಲಿ ಸ್ಥಾಪಿಸಲಾದ ನೀರು ಶುದ್ಧೀಕರಣ ಘಟಕ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮವಾಗಿ ಪ್ರಯಾಣಿಕರು ಖಾಸಗಿ ಅಂಗಡಿಗಳಲ್ಲಿ ಹಣ ನೀಡಿ ಬಾಟಲ್ ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ.
ರಾಮನಾಥಪುರ ಘಟಕದಿಂದ ಸುಮಾರು 76ಕ್ಕೂ ಹೆಚ್ಚು ರೂಟ್ಗಳಲ್ಲಿ ಬಸ್ಗಳು ಸಂಚರಿಸುತ್ತಿದ್ದು ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಣನೂರು ಬಸ್ ನಿಲ್ದಾಣದ ಕಾಂಪೌಂಡ್ ಕಾಮಗಾರಿ ಬಾಕಿಯಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ರಾಮನಾಥಪುರ ಘಟಕದ ಡಿಪೋ ವ್ಯವಸ್ಥಾಪಕ ನೂತನ್ ತಿಳಿಸಿದ್ದಾರೆ.
“ಕೊಣನೂರಿಗೆ ಸರಿಯಾದ ಸಮಯಕ್ಕೆ ದೂರದ ಊರಿನ ಬಸ್ಗಳು ಬರುವುದಿಲ್ಲ. ಕೆಲವು ಬಸ್ಗಳು ರಾಮನಾಥಪುರದಿಂದಲೇ ಹೊರಟು ಹೋಗುತ್ತವೆ. ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ,” ಎಂದು ಕೊಣನೂರಿನ ಪ್ರಯಾಣಿಕ ಸತ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
– ಕುಮಾರಸ್ವಾಮಿ ಎಂ.ಎನ್.
