ಕೊರಟಗೆರೆ:- ಭಾರತದ ಸ್ವಾತಂತ್ರ್ಯೋತ್ಸವ ಕೇವಲ ರಾಷ್ಟ್ರೀಯ ಹಬ್ಬವಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮವನ್ನು ಸ್ಮರಿಸುವ ಪವಿತ್ರ ದಿನವಾಗಿದೆ ಎಂದು ತಹಶೀಲ್ದಾರ್ ಕೆ. ಮಂಜುನಾಥ್ ಹೇಳಿದರು.
ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಕೇವಲ ಒಂದು ದೇಶವಲ್ಲ, ಅದು ಭಾವನೆ, ಅಭಿಮಾನ, ಗೌರವ ಮತ್ತು ಪ್ರೀತಿಯ ಸಂಕೇತವಾಗಿದೆ. ಪ್ರತಿಯೊಬ್ಬ ಭಾರತೀಯರೂ ದೇಶದ ಅಭಿವೃದ್ಧಿ ಹಾಗೂ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಇಂದಿನ ಯುವಕರಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜ್ಞಾನದ ಮಹಾಗುರುವನ್ನಾಗಿ ಮಾಡುವ ಶಕ್ತಿ ಇದೆ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ ಜಾಗತಿಕ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ತಲುಪಿಸುವುದು ಹಾಗೂ ಸ್ಥಳೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಯುವಕರು ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.

ಯುವಜನತೆ ಕೇವಲ ಸರ್ಕಾರದತ್ತ ಬೆರಳು ತೋರಿಸುವ ಬದಲು ತಾವೇ ಸಮಾಜದ ಬದಲಾವಣೆಯ ಹರಿಕಾರರಾಗಬೇಕು. ಸ್ವಾತಂತ್ರ್ಯ ಎಂದರೆ ಕೇವಲ ನಮಗೆ ದೊರೆತ ಹಕ್ಕುಗಳಲ್ಲ; ಅದರೊಂದಿಗೆ ಜವಾಬ್ದಾರಿಗಳೂ ಇವೆ. ಕಾನೂನುಗಳನ್ನು ಗೌರವಿಸುವುದು, ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸುವುದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ಪರಿಸರ ಸಂರಕ್ಷಣೆ ಹಾಗೂ ಮಹಿಳೆಯರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದ ವಾಸವಿ ಯುವಜನ ಸಂಘದ ಪದಾಧಿಕಾರಿಗಳು, ಕುಡಿಯುವ ನೀರು ಪೂರೈಸಿದ ಜಾಮಿಯಾ ಮಸೀದಿ ಕಾರ್ಯಕಾರಿ ಸಮಿತಿ ಹಾಗೂ ಮಕ್ಕಳಿಗೆ ನೋಟ್ಪುಸ್ತಕ ವಿತರಿಸಿದ ಕೊರಟಗೆರೆ ರೋಟರಿ ಕ್ಲಬ್ ಪದಾಧಿಕಾರಿಗಳನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು.
ಪೊಲೀಸ್ ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಂದ ಪಥಸಂಚಲನ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪೂರ್ವ, ವೃತ್ತ ನಿರೀಕ್ಷಕ ಜಿ. ಪುರುಷೋತ್ತಮ್, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್. ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ಬೇಗಂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಟಿ. ವೆಂಕಟೇಶ್ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಂ. ರುದ್ರೇಶ್, ಕಸಾಪ ಅಧ್ಯಕ್ಷ ಈರಣ್ಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ.
