ಕೊರಟಗೆರೆ:- ಗ್ರಾಮೀಣ ಪ್ರತಿಭೆಯೊಬ್ಬ ರಾಷ್ಟ್ರೀಯ ಮಟ್ಟದ ಟೆನಿಸ್ ಅಂಗಳದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕೊರಟಗೆರೆ ತಾಲ್ಲೂಕಿನ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದಾನೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಕಾಪುರ ಗ್ರಾಮದ ಮಂಜುನಾಥ್ ಮತ್ತು ಕವಿತಾ ದಂಪತಿಯ ಪುತ್ರ ಧನುಷ್ ಎಸ್.ಎಂ. ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ 12 ವರ್ಷದೊಳಗಿನ ಬಾಲಕರ ಎಐಟಿಎ (AITA) ನ್ಯಾಷನಲ್ ಸೀರೀಸ್ ಟೆನಿಸ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಮಿಂಚಿದ್ದಾನೆ.
ಬೆಂಗಳೂರಿನ ಎಬಿನೆಜರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಧನುಷ್, ಎಐಟಿಎ ಅಖಿಲ ಭಾರತ 12 ವರ್ಷದೊಳಗಿನ ಬಾಲಕರ ಶ್ರೇಯಾಂಕದಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾನೆ. ಕಿರಿಯ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಈ ಪ್ರತಿಭೆ ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದುಕೊಂಡಿದ್ದಾನೆ.
ಸೆಪ್ಟೆಂಬರ್ 15ರಿಂದ 20ರವರೆಗೆ ಸಿಂಗಾಪುರದಲ್ಲಿ ನಡೆಯಲಿರುವ 2026ರ ಡಬ್ಲ್ಯುಟಿಎ–ಎಟಿಎ 12 ಅಂಡ್ ಅಂಡರ್ ತಂಡಗಳ ಫೈನಲ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರತಿನಿಧಿಸಲು ಧನುಷ್ ಆಯ್ಕೆಯಾಗಿದ್ದಾನೆ. ಈ ಮೂಲಕ ಗ್ರಾಮೀಣ ಭಾಗದ ಪ್ರತಿಭೆಯೊಂದು ಅಂತರರಾಷ್ಟ್ರೀಯ ಟೆನಿಸ್ ಅಂಗಳದತ್ತ ಹೆಜ್ಜೆ ಇಟ್ಟಂತಾಗಿದೆ.
ಧನುಷ್ ಅವರು ಸೋಲ್ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿಯ ತರಬೇತುದಾರ ಸೂರಜ್ ಚಿಕ್ಕಣ್ಣವರ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಅವರ ಕ್ರೀಡಾ ಪಯಣಕ್ಕೆ ಡ್ಯಾಶ್ ವಿವಿ ಟೆಕ್ನಾಲಜೀಸ್ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.
ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದು, ಅಖಿಲ ಭಾರತ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಪಡೆದಿರುವ ಧನುಷ್, ಸಿಂಗಾಪುರದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾರತಕ್ಕೆ ಕೀರ್ತಿ ತರಲಿ ಎಂದು ಸಂಕಾಪುರ ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಹಾಗೂ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ
