ಕೊರಟಗೆರೆ :- ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಸಮುದಾಯ ಭವನಗಳ ಅಭಿವೃದ್ಧಿಗೆ ತಮ್ಮ ಸ್ವಂತ ದುಡಿಮೆಯ ಹಣವನ್ನು ನೀಡುವ ಮೂಲಕ ಸಮಾಜ ಸೇವೆಯ ಮಾದರಿಯಾಗಿದ್ದಾರೆ ಎಂದು ಕೋಳಾಲ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಅವರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಸಂಕೇನಹಳ್ಳಿ ಗ್ರಾಮದ ಬಸವೇಶ್ವರ ಹಾಗೂ ಗಣಪತಿ ದೇವಸ್ಥಾನದ ಸಮುದಾಯ ಭವನದ ಅಭಿವೃದ್ಧಿಗಾಗಿ ಪಿ.ಎನ್. ಕೃಷ್ಣಮೂರ್ತಿ ಅವರು ₹5 ಲಕ್ಷಗಳ ಕೊಡುಗೆಯನ್ನು ಘೋಷಿಸಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ಬಡ ಜನತೆಗೆ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನಗಳು ಅತ್ಯಂತ ಅಗತ್ಯವಾಗಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ತಂದೆ-ತಾಯಿಗಳ ಹೆಸರಿನಲ್ಲಿ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದ ಅವರು ನಾವೇ ಸ್ವತಃ ನಿಂತು ಸಮುದಾಯ ಭವನಗಳನ್ನು ನಿರ್ಮಿಸುತ್ತೇವೆ. ಸಮಾಜ ಸೇವೆ ಮಾಡುವುದು ಒಂದೇ ನಮ್ಮ ಗುರಿ ಎಂದು ಹೇಳಿದರು.
ತಮ್ಮ ಅಂತರಾಳದ ಅಭಿವ್ಯಕ್ತತೆಯನ್ನು ವ್ಯಕ್ತಪಡಿಸಿದ ಪಿಎನ್ ಕೃಷ್ಣಮೂರ್ತಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ, ತಾವು ಅಥವಾ ತಮ್ಮ ಪತ್ನಿ ಚಂದ್ರಕಲಾ ಪಿ.ಎನ್. ಕೃಷ್ಣಮೂರ್ತಿ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಇರುವುದನ್ನೂ ಇದೇ ವೇಳೆ ಪ್ರಸ್ತಾಪಿಸಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಬಡ ಜನರು ಕಲ್ಯಾಣ ಮಂಟಪಗಳಲ್ಲಿ ಹೆಚ್ಚಿನ ಹಣ ವೆಚ್ಚ ಮಾಡಿ ಮದುವೆ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಾಲೂಕಿನ ನಾಲ್ಕು ಹೋಬಳಿಗಳಲ್ಲೂ ಸಮುದಾಯ ಭವನಗಳನ್ನು ನಿರ್ಮಿಸಿ ನೀಡುವ ಸಂಕಲ್ಪ ಹೊಂದಿದ್ದೇನೆ ಎಂದು ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು.
ಇದೇ ವೇಳೆ ಮಾವತ್ತೂರು ಶ್ರೀ ಅರ್ಸೇಶ್ವರಿ ದೇವಸ್ಥಾನದ ಸಮೀಪ ಸುಮಾರು 500 ಜನರು ಬಳಸಬಹುದಾದ ಸುಸಜ್ಜಿತ ಸಮುದಾಯ ಭವನವನ್ನು ಈಗಾಗಲೇ ನಿರ್ಮಿಸಲಾಗಿದೆ ಅದನ್ನು ಮುಂದಿನ ದಿನಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಉಚಿತವಾಗಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎಸ್. ರಾಜಣ್ಣ ಮಾತನಾಡಿ ಕಳೆದ 20-25 ವರ್ಷಗಳಿಂದ ಪಿ.ಎನ್. ಕೃಷ್ಣಮೂರ್ತಿ ಅವರ ಸೇವಾ ಮನೋಭಾವವನ್ನು ನೋಡಿದ್ದೇವೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಈಗಲೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಸಾರ್ವಜನಿಕರು ಬೆಂಬಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಮುಖಂಡ ಆರಾಧ್ಯ ಮಾತನಾಡಿ ಸ್ಥಿತಿವಂತರಾದರೆಲ್ಲರೂ ಸಮಾಜ ಸೇವೆ ಮಾಡಲು ಸಾಧ್ಯವಿಲ್ಲ. ಸೇವಾ ಮನೋಭಾವ ಹೊಂದಿರುವವರು ಮಾತ್ರ ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ಆ ಗುಣವನ್ನು ಕೃಷ್ಣಮೂರ್ತಿ ಅವರಲ್ಲಿ ನಾವು ಕಂಡಿದ್ದೇವೆ. ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಸಂಕೇನಹಳ್ಳಿ ಸದಾಶಿವಯ್ಯ ಮಾತನಾಡಿ ಕ್ರೀಡೆ, ಪೌರಾಣಿಕ ನಾಟಕಗಳು, ಗ್ರಾಮೀಣ ದೇವಸ್ಥಾನಗಳ ಕಾರ್ಯಕ್ರಮಗಳು ಹಾಗೂ ಬಡವರಿಗಾಗಿ ಸಮುದಾಯ ಭವನಗಳ ನಿರ್ಮಾಣಕ್ಕೆ ಪಿ.ಎನ್. ಕೃಷ್ಣಮೂರ್ತಿ ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಯುವಕರ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಶಾಸಕರಾಗಿ ನೋಡುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಂಬು ರಾಜಣ್ಣ, ಮುಖಂಡರಾದ ನರಸಿಂಹರಾಜು, ವಿಜಯಕುಮಾರ್, ರಂಗರಾಜು, ಮಲಗನಹಳ್ಳಿ ಆರಾಧ್ಯ, ನಿವೃತ್ತ ಪೊಲೀಸ್ ಅಧಿಕಾರಿ ಸದಾಶಿವಯ್ಯ, ಎಸ್.ಪಿ. ಸಿದ್ದಪ್ಪ, ಕರಿಬಸವಯ್ಯ, ನರಸಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹೊಸಳಪ್ಪ ರಾಮಾನುಜಯ್ಯ, ನಾಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
