ಕೊರಟಗೆರೆ:– ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮದ ಚರಂಡಿಗಳ ದುಸ್ಥಿತಿ, ಕೊಳಚೆ ನೀರಿನ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದ ಕುರಿತು ವಿಚಾರ ವಿಸ್ತಾರ ವೆಬ್ ನಲ್ಲಿ ಪ್ರಕಟವಾದ ವರದಿಗೆ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿದ್ದಾರೆ. ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಚರಂಡಿಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಗ್ರಾಮದ ಚರಂಡಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕಸ-ಕಡ್ಡಿ ಹಾಗೂ ಗಿಡಗಂಟೆಗಳು ತುಂಬಿ ಹೋಗಿ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಇದರಿಂದ ಕೊಳಚೆ ನೀರು ನಿಂತು ಗಬ್ಬು ನಾರುತ್ತಿತ್ತು. ಈ ಬಗ್ಗೆ ಕಳೆದ ವಾರ ವಿಚಾರ ವಿಸ್ತಾರ ವೆಬ್ ನಲ್ಲಿ ಗುರುವಾರ “ಅಭಿವೃದ್ಧಿಯ ಜಪದ ನಡುವೆ ಗಬ್ಬು ನಾರುತ್ತಿರುವ ಅರಸಾಪುರ ಗ್ರಾಮದ ಚರಂಡಿಗಳು” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ಯುದ್ಧೋಪಾದಿಯಲ್ಲಿ ಸ್ವಚ್ಛತಾ ಕಾರ್ಯ
ವರದಿಯಿಂದ ಎಚ್ಚೆತ್ತ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿವಿಧ ಬ್ಲಾಕ್ಗಳಲ್ಲಿನ ಚರಂಡಿಗಳ ಹೂಳು, ಕಸ ಹಾಗೂ ಗಿಡಗಂಟೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮುಂಬರುವ ಮಳೆಗಾಲದಲ್ಲಿ ನೀರು ನಿಲ್ಲದಂತೆ ತಡೆಯಲು ತಾತ್ಕಾಲಿಕವಾಗಿ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

15 ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ
ಗ್ರಾಮದ 2ನೇ ಬ್ಲಾಕ್ನಲ್ಲಿ ಕಳೆದ 15 ವರ್ಷಗಳಿಂದ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಶಾಶ್ವತ ಚರಂಡಿ ನಿರ್ಮಾಣಕ್ಕಾಗಿ ತಾಂತ್ರಿಕ ವರದಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಕೆಟ್ಟು ನಿಂತಿರುವ ಬೀದಿ ದೀಪಗಳ ದುರಸ್ತಿ ಕಾರ್ಯಕ್ಕೂ ಆದ್ಯತೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರ ವಿಸ್ತಾರ ವೆಬ್ ಗೆ ಗ್ರಾಮಸ್ಥರ ಕೃತಜ್ಞತೆ
ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ವರದಿ ಧ್ವನಿಯಾಗಿರುವುದಕ್ಕೆ ಅರಸಾಪುರ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಒತ್ತಾಯ “ಈ ಸ್ವಚ್ಛತಾ ಕಾರ್ಯ ಕೇವಲ ತಾತ್ಕಾಲಿಕ ಕಾಟಾಚಾರದ ಕೆಲಸವಾಗಬಾರದು. ಅಧಿಕಾರಿಗಳು ನೀಡಿರುವ ಭರವಸೆಯಂತೆ ಶೀಘ್ರದಲ್ಲೇ ಶಾಶ್ವತ ಚರಂಡಿ ನಿರ್ಮಿಸಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಪತ್ರಿಕೆಗೆ ಮೆಚ್ಚುಗೆ “ಜನರ ಸಮಸ್ಯೆಗಳಿಗೆ ಧ್ವನಿ ಯಾಗುವ, ಸ್ಪಂದಿಸುವ ಮಾಧ್ಯಮದ ಜವಾಬ್ದಾರಿಯುತ ವರದಿಗಾರಿಕೆಗೆ ಈ ಫಲಶ್ರುತಿಯೇ ಸಾಕ್ಷಿ. ವಿಚಾರ ವಿಸ್ತಾರ ವೆಬ್ ನ ಸಾಮಾಜಿಕ ಕಳಕಳಿಗೆ ಧನ್ಯವಾದಗಳು” ಎಂದು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
